ADVERTISEMENT

ಎಲ್ಲೆಂದರಲ್ಲಿ ಪ್ರತಿಭಟನೆ ಸಲ್ಲದು: ಸುಪ್ರೀಂ ಕೋರ್ಟ್

ಪಿಟಿಐ
Published 13 ಫೆಬ್ರುವರಿ 2021, 14:43 IST
Last Updated 13 ಫೆಬ್ರುವರಿ 2021, 14:43 IST
ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಶಾಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆ (ಸಂಗ್ರಹ ಚಿತ್ರ)
ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ಶಾಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆ (ಸಂಗ್ರಹ ಚಿತ್ರ)   

ನವದೆಹಲಿ: ‘ಪ್ರತಿಭಟನೆಯ ಹಕ್ಕು ಇದೆ ಎಂದ ಮಾತ್ರಕ್ಕೆ, ಅದನ್ನು ಬೇಕುಬೇಕಾದಾಗ, ಎಲ್ಲೆಂದರಲ್ಲಿ ಬಳಸಲಾಗದು’ ಎಂದು ಸುಪ್ರೀಂ ಕೋರ್ಟ್ ಶನಿವಾರ ಪುನರುಚ್ಚರಿಸಿದೆ.

ಪೌರತ್ವ (ತಿದ್ದುಪಡಿ) ಕಾಯ್ದೆ ವಿರೋಧಿಸಿ ನವದೆಹಲಿಯ ಶಾಹೀನ್‌ ಬಾಗ್‌ನಲ್ಲಿ ಕಳೆದ ವರ್ಷ ನಡೆದಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ತಾನು ನೀಡಿದ್ದ ತೀರ್ಪಿನ ಮರು ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಶಾಹೀನ್‌ಬಾಗ್‌ ಪ್ರತಿಭಟನೆಯ ಬಗ್ಗೆ ವಿಮರ್ಶಾತ್ಮಕ ಪ್ರತಿಕ್ರಿಯೆ ನೀಡಿರುವ ಕೋರ್ಟ್‌, ‘ಆ ಪ್ರತಿಭಟನೆಯು ಮಹಿಳೆಯರಿಗೆ ಸೀಮಿತವಾದ, ಮಹಿಳಾ ಸಬಲೀಕರಣದ ಹೋರಾಟವಾಗಿ ಉಳಿದಿಲ್ಲ. ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ಸಾಮರ್ಥ್ಯವೂ ಮಹಿಳೆಯರಿಗೆ ಇಲ್ಲ’ ಎಂದಿದೆ.

ADVERTISEMENT

ಸಿಎಎ ವಿರೋಧಿ ಪ್ರತಿಭಟನೆ ಸಂದರ್ಭದಲ್ಲಿ ದೀರ್ಘ ಕಾಲದವರೆಗೆ ಸಾರ್ವಜನಿಕ ರಸ್ತೆಯಲ್ಲಿ ಸಂಚಾರಕ್ಕೆ ತಡೆ ಒಡ್ಡಿದ್ದನ್ನು ಆಕ್ಷೇಪಿಸಿದ್ದ ನ್ಯಾಯಾಲಯವು, ‘ದೀರ್ಘ ಕಾಲದವರೆಗೆ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ಪ್ರತಿಭಟನೆಯನ್ನು ಸ್ವೀಕರಿಸಲಾಗದು. ಇಂಥ ಪ್ರತಿಭಟನೆಗಳನ್ನು ನಿಗದಿತ ಜಾಗದಲ್ಲೇ ನಡೆಸಬೇಕು’ ಎಂದು 2020ರ ಅಕ್ಟೋಬರ್‌ 7ರಂದು ನೀಡಿದ್ದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ ಹೇಳಿತ್ತು.

‘ಕೆಲವೊಮ್ಮ ತಕ್ಷಣದ, ಸ್ವಯಂಪ್ರೇರಿತ ಪ್ರತಿಭಟನೆಗಳು ನಡೆಯಬಹುದು. ಆದರೆ, ಅದು ದೀರ್ಘ ಕಾಲ ಮುಂದುವರಿದರೆ, ಸಾರ್ವಜನಿಕ ರಸ್ತೆಯಲ್ಲಿ ಸತತವಾಗಿ ಸಂಚಾರವನ್ನು ತಡೆಯುವುದರಿಂದ ಇತರರ ಹಕ್ಕುಗಳಿಗೆ ಅಡ್ಡಿಪಡಿಸಿದಂತಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್, ಅನಿರುದ್ಧ ಬೋಸ್ ಮತ್ತು ಕೃಷ್ಣ ಮುರಾರಿ ಅವರನ್ನು ಒಳಗೊಂಡಿರುವ ನ್ಯಾಯಪೀಠ ಹೇಳಿದೆ.

‘ಮೇಲ್ಮನವಿಯಲ್ಲಿ ಉಲ್ಲೇಖಿಸಿದ ಅಂಶಗಳನ್ನು ಪರಿಶೀಲಿಸಿದ್ದೇವೆ. ಯಾವ ವಿಚಾರದಲ್ಲಿ ಅರ್ಜಿದಾರರು ಮರು ಪರಿಶೀಲನೆಯನ್ನು ಕೋರಿದ್ದಾರೋ, ಅದರಲ್ಲಿ ಬದಲಾವಣೆ ಮಾಡುವ ಅಗತ್ಯ ಕಾಣಿಸುತ್ತಿಲ್ಲ. ಹಿಂದಿನ ತೀರ್ಪುಗಳನ್ನು ಪರಿಶೀಲಿಸಿಯೇ ಕೋರ್ಟ್‌ ಈ ತೀರ್ಪನ್ನು ನೀಡಿದೆ. ಪ್ರತಿಭಟನೆ ನಡೆಸುವ ಅಥವಾ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕನ್ನು ಸಂವಿಧಾನವು ನೀಡುತ್ತದೆ. ಆದರೆ, ಅದರ ಜತೆಗೆ ಕೆಲವು ಕರ್ತವ್ಯಗಳನ್ನು ಪಾಲಿಸುವ ಹೊಣೆಯನ್ನೂ ಸಂವಿಧಾನ ನೀಡುತ್ತದೆ’ ಎಂದಿರುವ ಕೋರ್ಟ್‌, ಅರ್ಜಿಯನ್ನು ವಜಾ ಮಾಡಿದೆ. ಮುಕ್ತ ನ್ಯಾಯಾಲಯದಲ್ಲಿ ನಮ್ಮ ಅರ್ಜಿಯ ಮೌಖಿಕ ವಿಚಾರಣೆ ನಡೆಸಬೇಕು ಎಂಬಅರ್ಜಿದಾರರ ಬೇಡಿಕೆಯನ್ನೂ ತಿರಸ್ಕರಿಸಿದೆ.

ತೀರ್ಪು ಮರು ಪರಿಶೀಲನೆಗೆ ಕೋರಿ ಶಾಹೀನ್ ಬಾಗ್ ನಿವಾಸಿ ಖನಿಜ್ ಫಾತಿಮಾ ಮತ್ತು ಇನ್ನಿತರರು ಕಳೆದ ವರ್ಷ ಅಕ್ಟೋಬರ್ 7ರಂದು ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.