ADVERTISEMENT

ಸಚಿವ ಕಿರಣ್ ರಿಜಿಜು ಹೇಳಿಕೆ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕುವ ಪ್ರಯತ್ನ: ರಾವತ್

ಪಿಟಿಐ
Published 19 ಮಾರ್ಚ್ 2023, 14:20 IST
Last Updated 19 ಮಾರ್ಚ್ 2023, 14:20 IST
ಸಂಜಯ್‌ ರಾವುತ್‌
ಸಂಜಯ್‌ ರಾವುತ್‌   

ಮುಂಬೈ (ಪಿಟಿಐ): ಕೆಲ ನಿವೃತ್ತ ನ್ಯಾಯಮೂರ್ತಿಗಳು ‘ಭಾರತ ವಿರೋಧಿ ಗ್ಯಾಂಗ್‌’ನ ಭಾಗವಾಗಿದ್ದಾರೆ ಎಂಬ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರ ಹೇಳಿಕೆ ನ್ಯಾಯಾಂಗದ ಮೇಲೆ ಒತ್ತಡ ಹೇರುವ ಮತ್ತು ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕುವ ಪ್ರಯತ್ನವಾಗಿದೆ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಭಾನುವಾರ ಆರೋಪಿಸಿದ್ದಾರೆ.

‘ಇದು ಯಾವ ರೀತಿಯ ಪ್ರಜಾಪ್ರಭುತ್ವ? ನ್ಯಾಯಾಂಗಕ್ಕೆ ಬೆದರಿಕೆ ಹಾಕುವುದು ಕಾನೂನು ಸಚಿವರಿಗೆ ಸೂಕ್ತವೇ? ಸರ್ಕಾರಕ್ಕೆ ತಲೆಬಾಗಲು ನಿರಾಕರಿಸುವ ನ್ಯಾಯಮೂರ್ತಿಗಳಿಗೆ ಇದು ಬೆದರಿಕೆಯಾಗಿದೆ ಮತ್ತು ಇದು ನ್ಯಾಯಾಂಗದ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ’ ಎಂದು ಹೇಳಿದರು.

‘ಭಾರತೀಯ ನ್ಯಾಯಾಂಗ ವ್ಯವಸ್ಥೆಯು ವಿರೋಧ ಪಕ್ಷದ ಪಾತ್ರ ವಹಿಸುವಂತೆ ಮಾಡಲು ಕೆಲ ನಿವೃತ್ತ ನ್ಯಾಯಮೂರ್ತಿಗಳು ಮತ್ತು ಹೋರಾಟಗಾರರು ಪ್ರಯತ್ನಿಸುತ್ತಿದ್ದಾರೆ ಎಂದು ದೆಹಲಿಯಲ್ಲಿ ಶನಿವಾರ ನಡೆದ ‘ಇಂಡಿಯಾ ಟುಡೆ ಕಾಂಕ್ಲೇವ್’ನಲ್ಲಿ ರಿಜಿಜು ಹೇಳಿದ್ದರು.

ADVERTISEMENT

‘ಸರ್ಕಾರವನ್ನು ಟೀಕಿಸುವುದು ಎಂದರೆ ರಾಷ್ಟ್ರದ ವಿರುದ್ಧ ಇರುವುದು ಎಂದರ್ಥವಲ್ಲ’ ಎಂದು ರಾವತ್ ತಿಳಿಸಿದರು.

ಭಾರತದಲ್ಲಿ ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ರಾಹುಲ್ ಗಾಂಧಿ ಹೇಳಿಕೆ ನಂತರ ಈಗ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸುವ ಕ್ರಮ ನಡೆಯುತ್ತಿದೆ ಎಂದರು.

ರಾಹುಲ್ ಗಾಂಧಿ ಕ್ಷಮೆಯಾಚಿಸಬೇಕು ಎಂಬ ಬೇಡಿಕೆ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾವತ್, ‘ರಾಹುಲ್ ಗಾಂಧಿ ಕ್ಷಮೆಯಾಚಿಸುವುದಿಲ್ಲ ಮತ್ತು ಅವರು ಏಕೆ ಕ್ಷಮೆಯಾಚಿಸಬೇಕು?’. ಬಿಜೆಪಿ ನಾಯಕರು ವಿದೇಶಿ ನೆಲದಲ್ಲಿ ದೇಶ ಮತ್ತು ರಾಜಕೀಯ ನಾಯಕರ ವಿರುದ್ಧ ಮಾತನಾಡಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.