ADVERTISEMENT

ಹಿಂದಿನ ಸರ್ಕಾರವಿದ್ದಾಗ 3 ದಿನಕ್ಕೊಮ್ಮೆ ಗಲಭೆಯಾಗುತ್ತಿತ್ತು: ಯೋಗಿ ಆದಿತ್ಯನಾಥ್

ಪಿಟಿಐ
Published 31 ಆಗಸ್ಟ್ 2021, 12:59 IST
Last Updated 31 ಆಗಸ್ಟ್ 2021, 12:59 IST
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್    

ಲಖನೌ: ರಾಜ್ಯದಲ್ಲಿ ಹಿಂದಿನ ಸರ್ಕಾರಗಳು ಆಡಳಿತ ನಡೆಸುತ್ತಿದ್ದಾಗ ಪ್ರತಿ ಮೂರು ದಿನಗಳಿಗೊಮ್ಮೆ ದೊಡ್ಡ ಗಲಭೆ ನಡೆದು, ರಾಜ್ಯದ ಅಭಿವೃದ್ಧಿಗೆ ಅಡ್ಡಿಯಾಗುತ್ತಿತ್ತು ಮತ್ತು ರಾಜ್ಯವನ್ನು ಅಭಿವೃದ್ಧಿಯಿಂದ ವಂಚಿಸಿತ್ತು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಆರೋಪಿಸಿದ್ದಾರೆ.

ಈ ಹಿಂದಿನ ಸರ್ಕಾರಗಳು ಪ್ರಗತಿಯ ದೃಷ್ಟಿಕೋನದ ಕೊರತೆ ಮತ್ತು ಸಾಮಾನ್ಯ ಜನರಿಗೆ ವ್ಯಾಪಾರ ಮತ್ತು ಉದ್ಯೋಗಕ್ಕೆ ವೇದಿಕೆಯನ್ನು ಒದಗಿಸುವಲ್ಲಿ ವಿಫಲವಾಗಿದ್ದವು. 2003 ಮತ್ತು 2107 ರ ನಡುವೆ ಯಾವುದೇ ಹಬ್ಬವು ಶಾಂತಿಯುತವಾಗಿ ನಡೆದಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಎಡವಿತ್ತು ಎಂದು ಯೋಗಿ ಆರೋಪಿಸಿದರು.

'ಉತ್ತರ ಪ್ರದೇಶವು ಅರಾಜಕತೆ, ಗೂಂಡಾಗಿರಿ ಮತ್ತು ದುರಾಡಳಿತದಿಂದ ತತ್ತರಿಸಿದೆ' ಎಂದು ಸಿಎಂ ಇಲ್ಲಿ ಅಭಿವೃದ್ಧಿ ಯೋಜನೆಗಳನ್ನು ಆರಂಭಿಸಲು ಆಯೋಜಿಸಲಾದ ಕಾರ್ಯಕ್ರಮವನ್ನು ಉದ್ದೇಶಿಸಿ ಹೇಳಿದರು.

ADVERTISEMENT

'ಉತ್ತರ ಪ್ರದೇಶದಲ್ಲಿ 2012-17 ರಿಂದ ಪ್ರತಿ ಮೂರು ದಿನಕ್ಕೊಮ್ಮೆ ದೊಡ್ಡ ಗಲಭೆ ನಡೆಯುತ್ತಿತ್ತು. ಇದರಿಂದಾಗಿ ಎರಡೂ ಕಡೆಯ ಜನರು ಮೃತಪಟ್ಟರು. ಜೀವ ಮತ್ತು ಹಣದ ನಷ್ಟವನ್ನು ಎರಡೂ ಕಡೆಯವರು ಎದುರಿಸಬೇಕಾಯಿತು. ಅಂತಿಮವಾಗಿ, ಇದು ರಾಷ್ಟ್ರೀಯ ನಷ್ಟವಾಯಿತು. ಇದರಿಂದಾಗಿ ರಾಜ್ಯವು ಹಿಂದುಳಿಯಿತು ಮತ್ತು ಅಭಿವೃದ್ಧಿಗೆ ಅಡ್ಡಿಯಾಯಿತು' ಎಂದು ಉತ್ತರ ಪ್ರದೇಶವನ್ನು ಐದು ವರ್ಷಗಳ ಕಾಲ ಆಳಿದ ಸಮಾಜವಾದಿ ಪಕ್ಷದ ಹೆಸರನ್ನು ಉಲ್ಲೇಖಿಸದೆ ದೂರಿದರು.

ರಾಜ್ಯವು ಈಗ ವ್ಯಾಪಾರ-ವಹಿವಾಟಿಗೆ ಸೂಕ್ತ ನೆಲೆಯಾಗಿದೆ. ಹಿಂದಿನ ಸರ್ಕಾರದಲ್ಲಿ 14ನೇ ಸ್ಥಾನದಲ್ಲಿದ್ದ ರಾಜ್ಯವೀಗ ಬಿಜೆಪಿ ಆಡಳಿತದಲ್ಲಿ ಎರಡನೇ ಸ್ಥಾನಕ್ಕೆ ಜಿಗಿದಿದೆ. ದೇಶದಲ್ಲಿ ಹೂಡಿಕೆ ಮಾಡುವ ವಿದೇಶಿ ಹೂಡಿಕೆದಾರರಿಗೆ ರಾಜ್ಯವು ಈಗ ಮೊದಲ ಮೂರು ಆಯ್ಕೆಗಳಲ್ಲಿ ಒಂದಾಗಿದೆ ಎಂದು ಅವರು ಹೇಳಿದರು.

'ಕೊರೊನಾ ವೈರಸ್ ಅವಧಿಯಲ್ಲಿ, ಚೀನಾವೇ ಹೂಡಿಕೆಯನ್ನು ಕಳೆದುಕೊಳ್ಳುತ್ತಿದ್ದಾಗ ರಾಜ್ಯದಲ್ಲಿ 66,000 ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಯಿತು. ಉತ್ತರ ಪ್ರದೇಶದ ಆರ್ಥಿಕತೆಯು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ' ಎಂದು ತಿಳಿಸಿದರು.

'ನೇಪಾಳ, ಬಿಹಾರ, ಉತ್ತರಾಖಂಡ, ಮಧ್ಯ ಪ್ರದೇಶ, ಛತ್ತೀಸ್‌ಗಡ ಮತ್ತು ದೆಹಲಿಯಿಂದ ಅಂತರರಾಜ್ಯ ಸಂಪರ್ಕ ಸೇರಿದಂತೆ ಮೂಲಸೌಕರ್ಯ ಅಭಿವೃದ್ಧಿಯ ಕೆಲಸವನ್ನು ಆರಂಭಿಸಲಾಗಿದೆ. ನಾವು ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿ ಪರಿಣಮಿಸುವ ಎಕ್ಸ್‌ಪ್ರೆಸ್‌ವೇಗಳ ಜಾಲವನ್ನು ನಿರ್ಮಿಸುತ್ತಿದ್ದೇವೆ' ಎಂದು ಅವರು ಹೇಳಿದರು.

'ರಾಜ್ಯವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಕನಸನ್ನು ನಾವು ಈಡೇರಿಸುತ್ತೇವೆ' ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.