ADVERTISEMENT

ಬಿಹಾರ: ಎನ್‌ಡಿಎ ಮಿತ್ರ ಪಕ್ಷಗಳಲ್ಲಿ ಸ್ಥಾನ ಹಂಚಿಕೆಗೆ ಪೈಪೋಟಿ

ಲೋಕಸಭೆ ಚುನಾವಣೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 4:25 IST
Last Updated 18 ಜುಲೈ 2018, 4:25 IST
ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ (ಪಿಟಿಐ ಸಂಗ್ರಹ ಚಿತ್ರ)
ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ (ಪಿಟಿಐ ಸಂಗ್ರಹ ಚಿತ್ರ)   

ಪಟ್ನಾ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುಗಿಂತಲೂ ಹೆಚ್ಚು ಸ್ಥಾನವನ್ನು ನೀಡಬೇಕು ಎಂದು ಎನ್‌ಡಿಎ ಮೈತ್ರಿಕೂಟದ ರಾಷ್ಟ್ರೀಯ ಲೋಕಸಮತಾ ಪಕ್ಷ (ಆರ್‌ಎಲ್‌ಎಸ್‌ಪಿ) ಪಟ್ಟು ಹಿಡಿದಿದೆ.

ಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದಲ್ಲಿ ಪಕ್ಷಕ್ಕಿರುವ ಮೂಲ ಬೆಂಬಲ ಹೆಚ್ಚಾಗಿದೆ. ಹೀಗಾಗಿ ಹೆಚ್ಚು ಸ್ಥಾನ ನೀಡಬೇಕು. ಬಿಹಾರದಲ್ಲಿ ಎನ್‌ಡಿಎ ನಾಯಕನಾಗಿ ನಿತೀಶ್ ಕುಮಾರ್ ಬದಲಿಗೆ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರನ್ನು ಬಿಂಬಿಸಬೇಕು ಎಂದು ಆರ್‌ಎಲ್‌ಎಸ್‌ಪಿ ವಾದ ಮಂಡಿಸುತ್ತಿದೆ.

‘ಸೀಟು ಹಂಚಿಕೆಗೆ ಸಂಬಂಧಿಸಿ ಜೆಡಿಯು ಮತ್ತು ಬಿಜೆಪಿ ಮಧ್ಯೆ ಹೆಚ್ಚಿನ ಮಾತುಕತೆ ನಡೆಯುತ್ತಿದೆ. ಎನ್‌ಡಿಎಯ ಇತರ ಮಿತ್ರ ಪಕ್ಷಗಳಾದ ಆರ್‌ಎಲ್‌ಎಸ್‌ಪಿ ಮತ್ತು ಎಲ್‌ಜೆಪಿ (ಲೋಕ ಜನಶಕ್ತಿ ಪಕ್ಷ) ಜತೆ ಕಡಿಮೆ ಮಾತುಕತೆ ನಡೆದಿದೆ. ನಾವು ಜೆಡಿಯುಗಿಂತ ಹೆಚ್ಚು ಸ್ಥಾನ ಬಯಸುತ್ತೇವೆ. ಬಿಹಾರದ ರಾಜಕಾರಣದಲ್ಲಿ ನಮ್ಮ ನಾಯಕ ಉಪೇಂದ್ರ ಕುಶ್ವಾಹ ಅವರ ವರ್ಚಸ್ಸು ಹೆಚ್ಚುತ್ತಿದ್ದು, ಭವಿಷ್ಯದ ನಾಯಕರಾಗಿದ್ದಾರೆ. ಅವರನ್ನು ಎನ್‌ಡಿಎ ನಾಯಕನಾಗಿ ಬಿಂಬಿಸಬೇಕು’ ಎಂದು ಆರ್‌ಎಲ್‌ಎಸ್‌ಪಿ ಉಪಾಧ್ಯಕ್ಷ ಮತ್ತು ವಕ್ತಾರ ಜಿತೇಂದ್ರನಾಥ್ ಹೇಳಿದ್ದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

2014ರ ಲೋಕಸಭೆ ಚುನಾವಣೆಯಲ್ಲಿ ಆರ್‌ಎಲ್‌ಎಸ್‌ಪಿ ಕೇವಲ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೂ ಅವುಗಳಲ್ಲಿ ಜಯ ಸಾಧಿಸಿತ್ತು. ಆದರೆ, ಜೆಡಿಯು ಕೇವಲ ಎರಡು ಕ್ಷೇತ್ರಗಳಲ್ಲಷ್ಟೇ ಜಯ ಗಳಿಸಿತ್ತು ಎಂದೂ ನಾಥ್ ಹೇಳಿದ್ದಾರೆ.

‘ಕಳೆದ 12 ವರ್ಷಗಳಿಂದ ನಿತೀಶ್ ಕುಮಾರ್ ಅವರು ಯಾದವೇತರ ಹಿಂದುಳಿದ ವರ್ಗಗಳ ನಾಯಕರಾಗಿ ಗುರುತಿಸಿಕೊಂಡಿದ್ದಾರೆ ಎಂಬುದು ನಿಜ. ಆದರೆ, ಉಪೇಂದ್ರ ಕುಶ್ವಾಹ ಸಹ ಶೆಕಡಾ20ರಷ್ಟು ಮತ ಹಂಚಿಕೆ ಹೊಂದಿರುವ ಹಿಂದುಳಿದ ವರ್ಗಗಳಾದ ಕೊಯೆರಿ–ಕುರ್ಮಿ ಮತ್ತು ಧನುಕ್ ಪ್ರಾಬಲ್ಯದ ಹಿನ್ನೆಲೆಯುಳ್ಳವರಾಗಿದ್ದಾರೆ’ ಎಂದು ಅವರು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.