ಅಪಘಾತ
– ಎ.ಐ ಚಿತ್ರ
ನವದೆಹಲಿ: ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಶೇ 4.2ರಷ್ಟು ಏರಿಕೆಯಾಗಿದೆ. 2023ರಲ್ಲಿ 4.8 ಲಕ್ಷ ಅಪಘಾತ ಸಂಭವಿಸಿದೆ. ರಸ್ತೆ ಅಪಘಾತದಲ್ಲಿ ಪ್ರತಿ ಗಂಟೆಗೆ 20 ಮಂದಿ ಸಾವಿಗೀಡಾಗಿದ್ದಾರೆ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ ತಿಳಿಸಿದೆ.
ಪ್ರತಿ ಗಂಟೆಗೆ 55 ರಸ್ತೆ ಅಪಘಾತ ಸಂಭವಿಸಿದೆ ಎಂದು ಅದು ತಿಳಿಸಿದೆ.
ವಿವಿಧ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪೊಲೀಸ್ ಇಲಾಖೆಯಿಂದ 4,80,583 ಅಪಘಾತ ಪ್ರಕರಣಗಳು ವರದಿಯಾಗಿವೆ. ಇದರಲ್ಲಿ 1,72,890 ಜನರು ಸಾವಿಗೀಡಾಗಿದ್ದಾರೆ, 4,62,825 ಜನರು ಗಾಯಗೊಂಡಿದ್ದಾರೆ ಎಂದು 'ಭಾರತದಲ್ಲಿ ರಸ್ತೆ ಅಪಘಾತಗಳು 2023' ಎನ್ನುವ ವರದಿ ತಿಳಿಸಿದೆ.
ರಸ್ತೆ ಅಪಘಾತದಲ್ಲಿ ಸಾವಿಗೀಡಾದವರಲ್ಲಿ ಹೆಚ್ಚಿನವರು ಯುವಕರು ಎಂದು ವರದಿಯಲ್ಲಿ ಹೇಳಲಾಗಿದೆ. 2023ರಲ್ಲಿ ರಸ್ತೆ ಅಪಘಾತದಲ್ಲಿ ಸಾವಿಗೀಡಾದವರಲ್ಲಿ ಶೇ 66.4 ಮಂದಿ 18 ರಿಂದ 45 ವಯಸ್ಸಿನವರು.
2023ರಲ್ಲಿ ವರದಿಯಾದ 4,80,583 ಅಪಘಾತಗಳ ಪೈಕಿ, 1,50,177 (ಶೇ 31.2) ಅಪಘಾತಗಳು ಎಕ್ಸ್‌ಪ್ರೆಸ್‌ವೇಗಳು ಸೇರಿದಂತೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿವೆ. 1,05,622 (ಶೇ 22.0) ರಾಜ್ಯ ಹೆದ್ದಾರಿಗಳಲ್ಲಿ ಮತ್ತು ಉಳಿದ 2,24,744 (ಶೇ 46.8) ಇತರ ರಸ್ತೆಗಳಲ್ಲಿ ಸಂಭವಿಸಿವೆ.
ಒಟ್ಟು 1,72,890 ಸಾವುಗಳ ಪೈಕಿ , 63,112 (ಶೇ 36.5) ರಾಷ್ಟ್ರೀಯ ಹೆದ್ದಾರಿಗಳಲ್ಲಿ, 39,439 (ಶೇ 22.8) ರಾಜ್ಯ ಹೆದ್ದಾರಿಗಳಲ್ಲಿ ಮತ್ತು 70,339 (ಶೇ 40.7) ಇತರ ರಸ್ತೆಗಳಲ್ಲಿ ಸಂಭವಿಸಿವೆ ಎಂದು ವರದಿ ತಿಳಿಸಿದೆ.
1,60,509 ಮಾರಕ ಅಪಘಾತಗಳಲ್ಲಿ 57,467 (ಶೇ 35.8) ರಾಷ್ಟ್ರೀಯ ಹೆದ್ದಾರಿಗಳಲ್ಲಿ, 36,595 (ಶೇ 22.8) ರಾಜ್ಯ ಹೆದ್ದಾರಿಗಳಲ್ಲಿ ಮತ್ತು 66,447 (ಶೇ 41.4) ಇತರ ರಸ್ತೆಗಳಲ್ಲಿ ವರದಿಯಾಗಿದೆ.
ರಾಜ್ಯಗಳ ಪೈಕಿ ತಮಿಳುನಾಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅತಿ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿವೆ. ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.