ADVERTISEMENT

₹12 ಕೋಟಿ ಮೌಲ್ಯದ ಮೊಬೈಲ್‌ಗಳನ್ನು ದರೋಡೆ ಮಾಡಿದ್ದ ಖದೀಮರು: ಮುಂದೆ ಆಗಿದ್ದೇನು?

ಪಿಟಿಐ
Published 27 ಆಗಸ್ಟ್ 2022, 9:32 IST
Last Updated 27 ಆಗಸ್ಟ್ 2022, 9:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಾಗರ್, (ಮಧ್ಯಪ್ರದೇಶ): ಹೆದ್ದಾರಿಯಲ್ಲಿ ಲಾರಿ ಒಂದರಿಂದ ದರೋಡೆಯಾಗಿದ್ದ ಬರೋಬ್ಬರಿ ₹12 ಕೋಟಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು ಕೃತ್ಯ ನಡೆದ 24 ಗಂಟೆಯಲ್ಲೇ ಪೊಲೀಸರು ವಶಪಡಿಸಿಕೊಂಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ಪ್ರತಿಷ್ಠಿತ ಕಂಪನಿಯ ಮೊಬೈಲ್ ಫೋನ್‌ಗಳುಳ್ಳ ಬಾಕ್ಸ್‌ಗಳನ್ನು ತುಂಬಿಕೊಂಡು ತಮಿಳುನಾಡಿನಿಂದ ಗುರುಗ್ರಾಮಕ್ಕೆ ಹೊರಟಿದ್ದ ಹರಿಯಾಣದ ಲಾರಿಯನ್ನು ನಾಲ್ವರು ಅಪರಿಚಿತ ದರೋಡೆಕೋರರು ಮಧ್ಯಪ್ರದೇಶದ ಸಾಗರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ತಡೆದು ದರೋಡೆ ಮಾಡಿದ್ದರು. ಬಳಿಕ ಸರಕನ್ನು ಇನ್ನೊಂದು ಲಾರಿಗೆ ತುಂಬಿಕೊಂಡು ಪರಾರಿಯಾಗಿದ್ದರು.

ಸುದ್ದಿ ತಿಳಿದು ಸಿನಿಮೀಯ ರೀತಿಯಲ್ಲಿ ತಿನಿಖೆ ಮಾಡಿದ ಸಾಗರ್ ಜಿಲ್ಲಾ ಪೊಲೀಸರು, ದರೋಡೆಕೋರರ ಜಾಡು ಹಿಡಿದು ಬೆನ್ನಟ್ಟಿದ್ದರು. ಪೊಲೀಸರು ಬೆನ್ನತ್ತುತ್ತಿರುವುದನ್ನು ಅರಿತ ದರೋಡೆಕೋರರು ಇಂದೋರ್ ಬಳಿಯ ಶಿಫ್ರಾ ಬಳಿ ಕದ್ದ ಸರಕು ಸಮೇತ ಲಾರಿಯನ್ನು ಬಿಟ್ಟು ಪರಾರಿಯಾಗಿದ್ದರು.

ADVERTISEMENT

ಲಾರಿಯನ್ನು ವಶಕ್ಕೆ ಪಡೆದುಕೊಂಡು ನಾಲ್ವರು ದರೋಡೆಕೋರರ ಮೇಲೆ ದೂರು ದಾಖಲಿಸಿಕೊಂಡು ಅವರ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಸಾಗರ್ ಎಸ್‌ಪಿ ತರುಣ್ ನಾಯಕ್ ತಿಳಿಸಿದ್ದಾರೆ. ಈ ಬಗ್ಗೆ ಮೊಬೈಲ್‌ಗಳನ್ನು ಸಾಗಿಸುತ್ತಿದ್ದ ಪಶ್ಚಿಮ ಬಂಗಾಳ ಮೂಲದ ಲಾರಿ ಚಾಲಕ ಗೌರಝಾಮರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.