
ಯೋಗಿ ಆದಿತ್ಯನಾಥ್
ಲಖನೌ: ಉತ್ತರ ಪ್ರದೇಶದಲ್ಲಿ ಅಕ್ರಮವಾಗಿ ನೆಲಸಿರುವ ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶಿ ವಲಸಿಗರನ್ನು ಪತ್ತೆ ಮಾಡಲು ಉತ್ತರ ಪ್ರದೇಶ ಸರ್ಕಾರ ಬಂಧನ ಕೇಂದ್ರಗಳನ್ನು ತೆರೆಯುವ ಯೋಜನೆಯನ್ನು ರೂಪಿಸಿದೆ.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ರಾಜ್ಯದ 17 ನಗರಪಾಲಿಕೆಗಳ ವ್ಯಾಪ್ತಿಯಲ್ಲಿ ನೆಲಸಿರುವ ರೋಹಿಂಗ್ಯಾ ಮುಸ್ಲಿಮರು ಮತ್ತು ಬಾಂಗ್ಲಾದೇಶಿ ಪ್ರಜೆಗಳ ಪಟ್ಟಿ ತಯಾರಿಸುವಂತೆ ಬುಧವಾರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಇವರೆಲ್ಲರೂ ಉತ್ತರ ಪ್ರದೇಶದಲ್ಲಿ ನೈರ್ಮಲ್ಯ ಕೆಲಸಗಳಲ್ಲಿ ಹೆಚ್ಚಿನದಾಗಿ ತೊಡಗಿಸಿಕೊಂಡಿದ್ದಾರೆ. ಇವರ ವಿವರವುಳ್ಳ ಪಟ್ಟಿಯನ್ನು ಆಯುಕ್ತರು ಮತ್ತು ಪೊಲೀಸ್ ಮಹಾ ನಿರೀಕ್ಷಕರಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.
ದೆಹಲಿಗೆ ಹೊಂದಿಕೊಂಡ ಪ್ರತಿ ವಲಯದಲ್ಲೂ ಮೊದಲ ಹಂತದಲ್ಲಿ ಬಂಧನ ಕೇಂದ್ರಗಳನ್ನು ತೆರೆಯಲು ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಕ್ರಮ ವಲಸಿಗರನ್ನು ಇರಿಸಲು ಖಾಲಿ ಇರುವ ಸರ್ಕಾರಿ ಕಟ್ಟಡಗಳು, ಸಮುದಾಯ ಕೇಂದ್ರಗಳು ಮತ್ತು ಪೊಲೀಸ್ ಬಿಗಿ ಕಣ್ಗಾವಲಿನ ವಸತಿಗಳನ್ನು ಆಯ್ಕೆ ಮಾಡಲಾಗುತ್ತಿದೆ.
ಅಕ್ರಮ ವಲಸಿಗರಲ್ಲಿ ಬಹುತೇಕರು ಸರ್ಕಾರಿ ಕಲ್ಯಾಣ ಯೋಜನೆಗಳ ಪ್ರಯೋಜನ ಪಡೆಯಲು ವಾಸಸ್ಥಳ ದಾಖಲೆಗಳನ್ನೂ ಪಡೆದಿದ್ದಾರೆ. ಇಂತಹ ದಾಖಲೆಗಳ ಪರಿಶೀಲನೆಗೆ ಸೂಚಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
‘ಹಲವು ಜಿಲ್ಲೆಗಳಲ್ಲಿ ಅಕ್ರಮ ವಲಸಿಗರ ಪತ್ತೆ ಕಾರ್ಯ ನಡೆಯುತ್ತಿದೆ. ದಾಖಲೆಗಳ ಪರಿಶೀಲನೆ ಪೂರ್ಣಗೊಳ್ಳುವವರೆಗೆ ಬಂಧನ ಕೇಂದ್ರಗಳಲ್ಲಿಟ್ಟು, ಆನಂತರ ಅವರ ದೇಶಗಳಿಗೆ ಗಡಿಪಾರು ಮಾಡಲಾಗುವುದು’ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.