ನವದೆಹಲಿ: ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಯಾರೊಬ್ಬರೂ ಜಾತಿ ಆಧಾರದಲ್ಲಿ ತಾರತಮ್ಯ ಎದುರಿಸಬಾರದು. ಇದನ್ನು ಖಾತ್ರಿಪಡಿಸುವುದಕ್ಕಾಗಿ ‘ರೋಹಿತ್ ವೇಮುಲ ಕಾಯ್ದೆ’ ಹೆಸರಿನ ಕಾನೂನು ರೂಪಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರಾಹುಲ್ ಗಾಂಧಿ ಏಪ್ರಿಲ್ 16ರಂದು ಪತ್ರ ಬರೆದಿದ್ದಾರೆ.
ಬಿ.ಆರ್. ಅಂಬೇಡ್ಕರ್ ತಮ್ಮ ಜೀವಿತಾವಧಿಯಲ್ಲಿ ಎದುರಿಸಿದ್ದ ತಾರತಮ್ಯಕ್ಕೆ ಸಂಬಂಧಿಸಿದ ಹಲವು ಘಟನೆಗಳನ್ನು ರಾಹುಲ್ ಗಾಂಧಿ ಪತ್ರದಲ್ಲಿ ವಿವರಿಸಿದ್ದು, ಈ ಪತ್ರವನ್ನು ಅವರು ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
‘ಅಂಬೇಡ್ಕರ್ ಅವರು ಎದುರಿಸಿದಂತಹ ಅವಮಾನವನ್ನು ದೇಶದ ಯಾವ ಮಗುವೂ ಎದುರಿಸಬಾರದು ಎಂಬ ಮಾತನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪುತ್ತಾರೆ’ ಎಂದು ಹೇಳಿದ್ದಾರೆ.
ದಲಿತ ಸಮುದಾಯದ ರೋಹಿತ್ ವೇಮುಲ, ತಾನು ಅಧ್ಯಯನ ಮಾಡುತ್ತಿದ್ದ ಶಿಕ್ಷಣ ಸಂಸ್ಥೆಯಲ್ಲಿ ಜಾತಿ ಆಧಾರಿತ ತಾರತಮ್ಯದಿಂದಾಗಿ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು.
‘ರೋಹಿತ್ ವೇಮುಲ, ಪಾಯಲ್ ತಡ್ವಿ ಮತ್ತು ದರ್ಶನ್ ಸೋಳಂಕಿ ಅವರಂತಹ ಪ್ರತಿಭಾವಂತರ ಕೊಲೆಯನ್ನು ಒಪ್ಪಲಾಗದು. ತಾರತಮ್ಯವು ಈ ಪ್ರತಿಭಾವಂತರನ್ನು ಬಲಿ ಪಡೆದಿದೆ. ಇಂತಹ ಭೀಕರ ಘಟನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಬಾರದು ಹಾಗೂ ಇಂತಹ ಅನ್ಯಾಯಕ್ಕೆ ಅಂತ್ಯ ಹಾಡಲೇಬೇಕಾದ ಸಮಯ ಬಂದಿದೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ.
‘ದಲಿತ, ಆದಿವಾಸಿ ಹಾಗೂ ಒಬಿಸಿ ಸಮುದಾಯಕ್ಕೆ ಸೇರಿದ ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ನಾನು ಸಂಸತ್ ಭವನದಲ್ಲಿ ಇತ್ತೀಚೆಗೆ ಭೇಟಿ ಮಾಡಿದ್ದೆ. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ತಾವು ಎದುರಿಸುತ್ತಿರುವ ತಾರತಮ್ಯ ಕುರಿತು ಅವರು ವಿವರಿಸಿದರು. ಹಲವು ದಶಕಗಳ ನಂತರವೂ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಜಾತಿ ತಾರತಮ್ಯ ಎದುರಿಸಬೇಕಾಗಿರುವುದು ದುರದೃಷ್ಟಕರ’ ಎಂದು ಹೇಳಿದ್ದಾರೆ.
‘ಇಂತಹ ತಾರತಮ್ಯ ಹೋಗಲಾಡಿಸಲು ಹಾಗೂ ಜಾತಿ ಪದ್ಧತಿ ನಿರ್ಮೂಲನೆ ಮಾಡಲು ಶಿಕ್ಷಣವೊಂದೇ ಸಾಧನ. ತುಳಿತಕ್ಕೆ ಒಳಗಾದ ವ್ಯಕ್ತಿಯ ಸಬಲೀಕರಣವೂ ಶಿಕ್ಷಣದಿಂದ ಮಾತ್ರ ಸಾಧ್ಯ’ ಎಂದು ವಿವರಿಸಿದ್ದಾರೆ.
ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ದಲಿತರು ಆದಿವಾಸಿಗಳು ಹಾಗೂ ಒಬಿಸಿ ಸಮುದಾಯದ ವಿದ್ಯಾರ್ಥಿಗಳು ಈಗಲೂ ತಾರತಮ್ಯ ಎದುರಿಸುತ್ತಿರುವುದು ನಾಚಿಕೆಗೇಡಿನ ಸಂಗತಿರಾಹುಲ್ ಗಾಂಧಿ ಕಾಂಗ್ರೆಸ್ ನಾಯಕ
ಅಂಬೇಡ್ಕರ್ ಬದುಕಿನ ಘಟನೆಗಳ ಉಲ್ಲೇಖ ಎತ್ತಿನಗಾಡಿಯಲ್ಲಿ ಪ್ರಯಾಣ ಹೊರಟಿದ್ದರ ಕುರಿತು ಅಂಬೇಡ್ಕರ್ ವಿವರಿಸಿರುವುದನ್ನು ರಾಹುಲ್ ಉಲ್ಲೇಖಿಸಿದ್ದಾರೆ: ‘ಈ ಪಯಣದಲ್ಲಿ ನಮ್ಮೊಂದಿಗೆ ಸಾಕಷ್ಟು ಆಹಾರ ಇತ್ತು. ನಮ್ಮಲ್ಲಿ ಹಸಿವೂ ಇತ್ತು. ಆದಾಗ್ಯೂ ನಾವು ಏನನ್ನೂ ತಿನ್ನದೆಯೇ ಮಲಗಬೇಕಾಯಿತು. ನಮಗೆ ನೀರು ಸಿಗದ ಕಾರಣ ಹಸಿದ ಹೊಟ್ಟೆಯಲ್ಲೇ ಮಲಗಿದೆವು. ನಾವು ಅಸ್ಪೃಶ್ಯರಾಗಿದ್ದರಿಂದ ನಮಗೆ ನೀರು ಸಿಗಲಿಲ್ಲ’. ಶಾಲೆಯಲ್ಲಿನ ಘಟನೆಯನ್ನು ಕೂಡ ಅಂಬೇಡ್ಕರ್ ವಿವರಿಸಿದ್ದಾರೆ ಅದನ್ನೂ ಪತ್ರದಲ್ಲಿ ವಿವರಿಸಲಾಗಿದೆ: ‘ನಾನು ಅಸ್ಪೃಶ್ಯ ಎಂಬುದು ನನಗೆ ಗೊತ್ತಿತ್ತು. ಅಸ್ಪೃಶ್ಯರು ಕೆಲ ತಾರತಮ್ಯ ಹಾಗೂ ಅವಮಾನಗಳನ್ನು ಎದುರಿಸಬೇಕಾಗುತ್ತಿತ್ತು. ನಾನು ಪಡೆದ ರ‍್ಯಾಂಕ್ ಆಧಾರದ ಮೇಲೆ ನಾನು ಶಾಲೆಯಲ್ಲಿ ನನ್ನ ಸಹಪಾಠಿಗಳೊಂದಿಗೆ ಕೂಡಲು ಸಾಧ್ಯವಿಲ್ಲ ಎಂಬುದು ಕೂಡ ಗೊತ್ತಿತ್ತು. ನಾನು ಕೊಠಡಿಯ ಒಂದು ಮೂಲೆಯಲ್ಲಿ ಒಬ್ಬನೇ ಕುಳಿತುಕೊಳ್ಳುತ್ತಿದ್ದೆ’.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.