ADVERTISEMENT

ರೋಹಿತ್‌ ವೇಮುಲ ಸಾಮಾಜಿಕ ತಾರತಮ್ಯದ ಪ್ರತೀಕ: ರಾಹುಲ್‌

ಪಿಟಿಐ
Published 1 ನವೆಂಬರ್ 2022, 12:48 IST
Last Updated 1 ನವೆಂಬರ್ 2022, 12:48 IST
ಭಾರತ್‌ ಜೋಡೊ ಯಾತ್ರೆಯಲ್ಲಿ ಭಾಗಿಯಾಗಿದ್ದ ರಾಧಿಕಾ ವೇಮುಲ ಅವರನ್ನು ರಾಹುಲ್‌ ಗಾಂಧಿ ಅಪ್ಪಿಕೊಂಡ ಕ್ಷಣ –ಟ್ವಿಟರ್‌ ಚಿತ್ರ 
ಭಾರತ್‌ ಜೋಡೊ ಯಾತ್ರೆಯಲ್ಲಿ ಭಾಗಿಯಾಗಿದ್ದ ರಾಧಿಕಾ ವೇಮುಲ ಅವರನ್ನು ರಾಹುಲ್‌ ಗಾಂಧಿ ಅಪ್ಪಿಕೊಂಡ ಕ್ಷಣ –ಟ್ವಿಟರ್‌ ಚಿತ್ರ    

ಹೈದರಾಬಾದ್‌ (ಪಿಟಿಐ): ‘ದಲಿತ ಸಮುದಾಯಕ್ಕೆ ಸೇರಿದ್ದ ರೋಹಿತ್‌ ವೇಮುಲ ಅವರು ಸಾಮಾಜಿಕ ತಾರತಮ್ಯ ಹಾಗೂ ಅನ್ಯಾಯದ ವಿರುದ್ಧ ನಾನು ನಡೆಸುತ್ತಿರುವ ಹೋರಾಟದ ಪ್ರತೀಕವಾಗಿದ್ದಾರೆ’ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.

ಪಿಎಚ್‌.ಡಿ ವಿದ್ಯಾರ್ಥಿಯಾಗಿದ್ದ ರೋಹಿತ್‌,ಜಾತಿನಿಂದನೆಯಿಂದ ಮನನೊಂದು 2016 ಜ.17ರಂದು ಹೈದರಾಬಾದ್‌ ಕೇಂದ್ರ ವಿಶ್ವವಿದ್ಯಾಲಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ರೋಹಿತ್‌ ತಾಯಿ ರಾಧಿಕಾ ವೇಮುಲ ಅವರು ಭಾರತ್‌ ಜೋಡೊ ಯಾತ್ರೆಯಲ್ಲಿ ಮಂಗಳವಾರ ಪಾಲ್ಗೊಂಡು ರಾಹುಲ್‌ ಜೊತೆ ಕೆಲ ದೂರ ಹೆಜ್ಜೆ ಹಾಕಿದರು.

‘ಭಾರತ್‌ ಜೋಡೊ ಯಾತ್ರೆಯು ಏಕತೆಯನ್ನು ಸಾರುತ್ತಿದೆ. ಹೀಗಾಗಿ ರಾಹುಲ್‌ ಗಾಂಧಿ ಅವರ ಜೊತೆಗೆ ಹೆಜ್ಜೆ ಹಾಕಿದ್ದೇನೆ. ಬಿಜೆಪಿ-ಆರ್‌ಎಸ್‌ಎಸ್‌ನಿಂದ ಸಂವಿಧಾನ ರಕ್ಷಿಸುವಂತೆ ಕಾಂಗ್ರೆಸ್‌ಗೆ ಮನವಿ ಮಾಡಿದ್ದೇನೆ.ರೋಹಿತ್‌ಗೆ ನ್ಯಾಯ ದೊರಕಿಸಿಕೊಡುವಂತೆ,ರೋಹಿತ್‌ ಕಾಯ್ದೆಯನ್ನು ಅನುಷ್ಠಾನಕ್ಕೆ ತರುವಂತೆ, ದಲಿತರ ಪ್ರಾತಿನಿಧ್ಯ ಹೆಚ್ಚಿಸುವಂತೆ, ಎಲ್ಲರಿಗೂ ಶಿಕ್ಷಣ ನೀಡುವಂತೆ ಮನವಿ ಮಾಡಿದ್ದೇನೆ’ ಎಂದು ರಾಧಿಕಾ ಅವರು ರಾಹುಲ್‌ ಭೇಟಿಯ ಬಳಿಕ ಟ್ವೀಟ್‌ ಮಾಡಿದ್ದಾರೆ.

ADVERTISEMENT

‘ನಿರ್ದಿಷ್ಟ ಗುರಿಯೆಡೆಗಿನ ನಮ್ಮ ಪ್ರಯಾಣಕ್ಕೆರೋಹಿತ್‌ ಅವರ ತಾಯಿಯ ಭೇಟಿ ಹೊಸ ಸ್ಫೂರ್ತಿ ನೀಡಿದೆ. ಮನಸ್ಸಿಗೆ ಶಾಂತಿ ಲಭಿಸಿದೆ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

ಕಾಂಗ್ರೆಸ್‌ ಮತ್ತು ಪಕ್ಷದ ಕಾರ್ಯಕರ್ತರು ರಾಧಿಕಾವೇಮುಲ ಅವರು ರಾಹುಲ್‌ ಗಾಂಧಿ ಜೊತೆ ಹೆಜ್ಜೆ ಹಾಕುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ರೋಹಿತ್‌ವೇಮುಲಅವರು ಆತ್ಮಹತ್ಯೆ ಮಾಡಿಕೊಂಡ ಬಳಿಕ ರಾಷ್ಟ್ರಮಟ್ಟದಲ್ಲಿ ಜಾತಿನಿಂದನೆ ವಿರುದ್ಧ ಬೃಹತ್‌ ಹೋರಾಟ ನಡೆದಿತ್ತು. ವಿದ್ಯಾರ್ಥಿಗಳ ಹೋರಾಟಕ್ಕೆ ರಾಹುಲ್‌ ಕೂಡ ಜೊತೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.