ADVERTISEMENT

ಪ್ರಜ್ಞಾ ಸಿಂಗ್ ಲಸಿಕೆ ವಿವಾದ: ಸಂಸದೆ ಮನೆಯಲ್ಲಿಯೇ ಲಸಿಕೆ ಪಡೆದದ್ದಕ್ಕೆ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 18:21 IST
Last Updated 16 ಜುಲೈ 2021, 18:21 IST
ಪ್ರಜ್ಞಾ ಸಿಂಗ್
ಪ್ರಜ್ಞಾ ಸಿಂಗ್   

ಭೋಪಾಲ್:ಭೋಪಾಲ್‌ನ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ತಮ್ಮ ಮನೆಯಲ್ಲಿಯೇ ಕೋವಿಡ್‌ ಲಸಿಕೆ ಹಾಕಿಸಿಕೊಂಡದ್ದು ಈಗ ವಿವಾದಕ್ಕೆ ಕಾರಣವಾಗಿದೆ. ‘ಸಂಸದೆಗೆ ಮನೆಯಲ್ಲಿಯೇ ಲಸಿಕೆ ಹಾಕುವ ಮೂಲಕ ಲಸಿಕೆ ನಿಯಮಗಳನ್ನು ಉಲ್ಲಂಘಿಸಲಾಗಿದೆ’ ಎಂದು ಕಾಂಗ್ರೆಸ್‌ ಟೀಕಿಸಿದೆ.

ಪ್ರಜ್ಞಾ ಸಿಂಗ್ ಅವರು ಶುಕ್ರವಾರ ತಮ್ಮ ಮನೆಯಲ್ಲಿಯೇ ಕೋವಿಡ್‌ ಲಸಿಕೆ ಹಾಕಿಸಿಕೊಂಡಿದ್ದರು. ಜತೆಗೆ ಇದು ತಮ್ಮ ಮೊದಲ ಡೋಸ್‌ ಎಂದು ಅವರು ಹೇಳುತ್ತಿರುವ ವಿಡಿಯೊವನ್ನು ಅವರು ಟ್ವೀಟ್ ಮಾಡಿದ್ದರು.

‘ರಾಜ್ಯದ ಜನರು ಗಂಟೆಗಟ್ಟಲೆ ಕಾದು ನಿಂತು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಆದರೆ ಸಂಸದೆ ಜನರನ್ನು ಬದಿಗೊತ್ತಿ, ಮನೆಯಲ್ಲಿಯೇ ಲಸಿಕೆ ಹಾಕಿಸಿಕೊಂಡಿದ್ದಾರೆ’ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಟೀಕಿಸಿದೆ.

ADVERTISEMENT

ಇದಕ್ಕೆ ರಾಜ್ಯದ ಆರೋಗ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದರು. ‘ವೃದ್ಧರಿಗೆ ಮತ್ತು ಅಂಗವಿಕಲರಿಗೆ ಮನೆಯಲ್ಲಿಯೇ ಲಸಿಕೆ ಹಾಕಲು ಅವಕಾಶವಿದೆ. ಪ್ರಜ್ಞಾ ಸಿಂಗ್ ಅವರಿಗೆ ಲಸಿಕೆ ಹಾಕಿದ್ದರಲ್ಲಿ ಯಾವುದೇ ನಿಯಮವನ್ನು ಉಲ್ಲಂಘನೆ ಮಾಡಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.

‘ಒಂದೆರಡು ದಿನಗಳ ಹಿಂದೆಯಷ್ಟೇ ಪ್ರಜ್ಞಾ ಸಿಂಗ್ ಅವರು ತಮ್ಮ ಮನೆಯಲ್ಲಿ ಮದುವೆಯೊಂದನ್ನು ಆಯೋಜಿಸಿದ್ದರು. ಆ ಮದುವೆಯಲ್ಲಿ ಅವರು ನೃತ್ಯ ಮಾಡಿದ್ದಾರೆ. ಈಚೆಗೆ ಬ್ಯಾಸ್ಕೆಟ್‌ಬಾಲ್ ಸಹ ಆಡಿದ್ದರು. ಎರಡೂ ವಿಡಿಯೊಗಳನ್ನು ಅವರೇ ಟ್ವೀಟ್ ಮಾಡಿದ್ದಾರೆ. ನೃತ್ಯ ಮಾಡುವಷ್ಟು ಶಕ್ತಿ ಇರುವವರಿಗೆ ಮನೆಯಲ್ಲಿಯೇ ಲಸಿಕೆ ನೀಡಲಾಗಿದೆ. ಕೇವಲ 51 ವರ್ಷ ವಯಸ್ಸಿನ ಪ್ರಜ್ಞಾ ಸಿಂಗ್ ಅವರು ವೃದ್ಧರೂ ಅಲ್ಲ. ವೃದ್ಧರೂ ಅಲ್ಲದ, ಅಂಗವಿಕಲರೂ ಅಲ್ಲದ ಪ್ರಜ್ಞಾ ಸಿಂಗ್ ಅವರಿಗೆ ಮನೆಯಲ್ಲಿಯೇ ಲಸಿಕೆ ನೀಡುವ ಮೂಲಕ ನಿಯಮ ಉಲ್ಲಂಘಿಸಲಾಗಿದೆ’ ಎಂದು ಕಾಂಗ್ರೆಸ್‌ನ ವಕ್ತಾರ ನರೇಂದ್ರ ಸಲೂಜಾ ಅವರು ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.