ADVERTISEMENT

ಸರ್ಕಾರಿ ಶಾಲೆಗಳಲ್ಲಿ ಉರ್ದು ಬದಲಿಗೆ ಸಂಸ್ಕೃತ: ರಾಜಸ್ಥಾನದಲ್ಲಿ ಹೊಸ ವಿವಾದ

ಗೃಹ ಸಚಿವರ ಹೇಳಿಕೆಗೂ ಟೀಕೆ

ಪಿಟಿಐ
Published 18 ಫೆಬ್ರುವರಿ 2025, 13:09 IST
Last Updated 18 ಫೆಬ್ರುವರಿ 2025, 13:09 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಜೈಪುರ: ರಾಜಸ್ಥಾನದ ಕೆಲವು ಸರ್ಕಾರಿ ಶಾಲೆಗಳಲ್ಲಿ ಉರ್ದು ಬದಲಿಗೆ ಸಂಸ್ಕೃತವನ್ನು ತೃತೀಯ ಭಾಷೆಯನ್ನಾಗಿ ಬೋಧಿಸುವ ಆದೇಶ ಹೊರಡಿಸಲಾಗಿದೆ.

ತರಗತಿಗಳಲ್ಲಿ ತೃತೀಯ ಭಾಷೆಯಾಗಿ ಉರ್ದು ಬೋಧಿಸುವುದನ್ನು ಕೈಬಿಟ್ಟು, ಅದನ್ನು ಆಯ್ಕೆಯಾಗಿ ಪರಿಚಯಿಸುವಂತೆ ಜೈಪುರದ ಮಹಾತ್ಮ ಗಾಂಧಿ ಸರ್ಕಾರಿ ಶಾಲೆಗೆ (ಆರ್‌ಎಸಿ ಬೆಟಾಲಿಯನ್) ರಾಜಸ್ಥಾನದ ಶಿಕ್ಷಣ ಇಲಾಖೆಯು ಇತ್ತೀಚೆಗೆ ಆದೇಶಿಸಿತ್ತು. ಕೆಲವು ದಿನಗಳ ನಂತರ, ಬಿಕಾನೇರ್‌ನಲ್ಲಿರುವ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಗೂ ಇದೇ ರೀತಿಯಾಗಿ, ಭಾಷಾ ಮಾಧ್ಯಮ ಬದಲಿಸುವಂತೆ ಸೂಚನೆ ಬಂದಿತ್ತು.

ADVERTISEMENT

ಈ ಎರಡು ಆದೇಶಗಳ ವಿರುದ್ಧ ಹೆಚ್ಚುತ್ತಿರುವ ಅಸಮಾಧಾನದ ನಡುವೆ, ‘ರಾಜ್ಯದಲ್ಲಿ ಅನೇಕ ಉರ್ದು ಶಿಕ್ಷಕರು ನಕಲಿ ಪದವಿಗಳೊಂದಿಗೆ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ’ ಎಂದು ಗೃಹ ಖಾತೆ ರಾಜ್ಯ ಸಚಿವ ಜವಾಹರ್ ಸಿಂಗ್ ಬೇಧಮ್ ಹೇಳಿದ ನಂತರ ಹೊಸ ವಿವಾದ ಭುಗಿಲೆದ್ದಿದೆ.

ರಾಜಸ್ಥಾನದ ಉರ್ದು ಶಿಕ್ಷಕರ ಸಂಘವು ಸಚಿವರ ಹೇಳಿಕೆ ಆಧಾರರಹಿತ ಮತ್ತು ಬೇಜವಾಬ್ದಾರಿ ಎಂದು ಟೀಕಿಸಿದೆ.

‘ಇದು ಎಲ್ಲ ಶಾಲೆಗಳಿಗೆ ನೀಡಿರುವ ಆದೇಶವಲ್ಲ, ಒಬ್ಬ ವಿದ್ಯಾರ್ಥಿ ಹೊರತುಪಡಿಸಿ, ಬಿಕಾನೇರ್‌ನ ನಪಾಸರ್‌ನಲ್ಲಿರುವ ಸರ್ಕಾರಿ ಶಾಲೆಯಲ್ಲಿ ಉರ್ದುವನ್ನು ತೃತೀಯ ಭಾಷೆಯಾಗಿ ಓದುವವರು ಯಾರೂ ಇಲ್ಲ. ಹಾಗಾಗಿ, ಅದನ್ನು ಸ್ಥಗಿತಗೊಳಿಸಲಾಗಿದೆ’ ಎಂದು ಪ್ರೌಢ ಶಿಕ್ಷಣ ಮಂಡಳಿ ನಿರ್ದೇಶಕ ಆಶಿಶ್ ಮೋದಿ ಸ್ಪಷ್ಟಪಡಿಸಿದ್ದಾರೆ.

‘ಹಿಂದಿನ (ಕಾಂಗ್ರೆಸ್) ಸರ್ಕಾರವು ಸಂಸ್ಕೃತ ಶಿಕ್ಷಕರನ್ನು ತೆಗೆದುಹಾಕಿ, ಅವರ ಸ್ಥಾನಕ್ಕೆ ಉರ್ದು ಶಿಕ್ಷಕರನ್ನು ನೇಮಿಸಿತ್ತು. ಈಗ ನಮಗೆ ಉರ್ದು ತಿಳಿದಿಲ್ಲ ಮತ್ತು ಯಾರೂ ಆ ವಿಷಯವನ್ನು ಅಧ್ಯಯನ ಮಾಡುತ್ತಿಲ್ಲ. ಅದಕ್ಕಾಗಿಯೇ ನಾವು ಉರ್ದು ಶಿಕ್ಷಕರ ಹುದ್ದೆ ತೆಗೆದು, ಇಲ್ಲಿ ಜನರು ಬಯಸುವ ರೀತಿಯ ಶಿಕ್ಷಣ ನೀಡುತ್ತೇವೆ’ ಎಂದು ಬೇಧಮ್ ಅವರು ಭರತ್‌ಪುರದಲ್ಲಿ ಸೋಮವಾರ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.