ತಿರುವನಂತಪುರ: ಕೇರಳದ ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿ, ಅರಣ್ಯ ಮಾರ್ಗದಲ್ಲಿ ಟ್ರ್ಯಾಕ್ಟರ್‌ನಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ತೆರಳಿರುವುದು ವಿವಾದಕ್ಕೀಡಾಗಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾದ (ಎಡಿಜಿಪಿ) ಎಂ.ಆರ್. ಅಜಿತ್ ಕುಮಾರ್ ಸೇರಿ ಮೂವರು ಟ್ರ್ಯಾಕ್ಟರ್‌ನಲ್ಲಿ ಕಳೆದ ವಾರ ಶಬರಿಮಲೆಗೆ ಪ್ರಯಾಣಿಸಿದ್ದರು. ಟ್ರ್ಯಾಕ್ಟರ್ ಚಾಲನೆ ಮಾಡಿದ್ದ ಇನ್ನೊಬ್ಬ ಪೊಲೀಸ್ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಶಬರಿಮಲೆಯ ವಿಶೇಷ ಕಮಿಷನರ್ ಅವರ ವರದಿ ಆಧಾರದ ಮೇಲೆ ನ್ಯಾಯಾಲಯವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಸರಕು ಸಾಗಣೆಗೆ ಮಾತ್ರವೇ ಟ್ರ್ಯಾಕ್ಟರ್ ಬಳಸಬೇಕು ಎಂದು ಹೈಕೋರ್ಟ್ ನೀಡಿರುವ ಆದೇಶ ಜಾರಿಯಲ್ಲಿದೆ. ಇದನ್ನು ಉಲ್ಲಂಘಿಸಿರುವ ಅಧಿಕಾರಿಯ ನಡೆಯನ್ನು ಹೈಕೋರ್ಟ್‌ನ ದೇವಸ್ವಂ ಪೀಠವು ತೀವ್ರವಾಗಿ ಖಂಡಿಸಿದೆ.
ನ್ಯಾಯಮೂರ್ತಿಗಳಾದ ಅನೀಲ್ ಕೆ. ನರೇಂದ್ರನ್ ಹಾಗೂ ಮುರಳೀ ಕೃಷ್ಣ ಎಸ್. ಅವರಿದ್ದ ಪೀಠವು, ‘ಘಟನೆಗೆ ಸಂಬಂಧಿಸಿದಂತೆ ಯಾವ ಕ್ರಮ ಕೈಗೊಂಡಿದ್ದೀರಿ’ ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು.
ಘಟನೆ ಸಂಬಂಧ ಎಫ್‌ಐಆರ್ ದಾಖಲಿಸಲಾಗಿದೆ. ಎಡಿಜಿಪಿ ಅಜಿತ್ ಅವರಿಂದ ವಿವರಣೆ ಕೇಳಲಾಗಿದೆ ಎಂದು ಸರ್ಕಾರವು ಪೀಠಕ್ಕೆ ಮಾಹಿತಿ ನೀಡಿತು.
‘ಅಧಿಕಾರಿಯು ಅನಾರೋಗ್ಯದಿಂದ ಬಳಲುತ್ತಿದ್ದರೆ ಆಂಬುಲೆನ್ಸ್ ಬಳಸಬೇಕಿತ್ತು’ ಎಂದಿರುವ ಪೀಠವು ನಿಯಮ ಉಲ್ಲಂಘನೆ ಕುರಿತು ಸಂಪೂರ್ಣ ಮಾಹಿತಿ ನೀಡುವಂತೆ ಪೊಲೀಸರಿಗೆ ಆದೇಶಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.