ADVERTISEMENT

ಗಣಿಗಳ ಮೇಲೆ ಕೇಂದ್ರದ ರಾಯಧನ: ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್

ಪಿಟಿಐ
Published 31 ಜುಲೈ 2024, 15:21 IST
Last Updated 31 ಜುಲೈ 2024, 15:21 IST
<div class="paragraphs"><p>ಸುಪ್ರೀಂ ಕೋರ್ಟ್</p></div>

ಸುಪ್ರೀಂ ಕೋರ್ಟ್

   

ನವದೆಹಲಿ: ಗಣಿಗಳ ಮೇಲೆ ಹಾಗೂ ಖನಿಜ ಇರುವ ಭೂಪ್ರದೇಶದ ಮೇಲೆ ಕೇಂದ್ರ ಸರ್ಕಾರವು 1989ರಿಂದ ವಿಧಿಸುತ್ತಿರುವ ರಾಯಧನವನ್ನು ರಾಜ್ಯಗಳಿಗೆ ಮರಳಿಸಬೇಕೇ ಎಂಬ ವಿಚಾರದ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್‌ ಕಾಯ್ದಿರಿಸಿದೆ.

ಜುಲೈ 25ರಂದು ಮಹತ್ವದ ತೀರ್ಪೊಂದನ್ನು ನೀಡಿದ ಸುಪ್ರೀಂ ಕೋರ್ಟ್‌ನ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವು, ಖನಿಜಗಳು ಮತ್ತು ಗಣಿಗಾರಿಕೆ ಮೇಲೆ ತೆರಿಗೆ ವಿಧಿಸುವ ಶಾಸನಬದ್ಧ ಹಕ್ಕು ರಾಜ್ಯಗಳ ಕೈಯಲ್ಲಿರುತ್ತದೆ ಎಂದು ಸಾರಿತು. 8:1ರ ಬಹುಮತದ ಈ ತೀರ್ಪು, ಖನಿಜಗಳ ಮೇಲೆ ವಿಧಿಸುವ ರಾಯಧನವು ತೆರಿಗೆ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿತು.

ADVERTISEMENT

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠವು ಈ ತೀರ್ಪು ನೀಡಿದೆ. ಖನಿಜ ಸಂಪತ್ತು ಹೇರಳವಾಗಿರುವ ರಾಜ್ಯಗಳಿಗೆ ಈ ತೀರ್ಪಿನ ಪರಿಣಾಮವಾಗಿ ವರಮಾನ ಸಂಗ್ರಹಿಸಲು ಹೆಚ್ಚು ಬಲ ಬಂದಂತೆ ಆಗಿದೆ ಎಂದು ವಿಶ್ಲೇಷಿಸಲಾಗಿದೆ.

ಆದರೆ ಈ ತೀರ್ಪಿನ ಜಾರಿ ಕುರಿತಾಗಿ ಇನ್ನೊಂದು ವಿವಾದ ಸೃಷ್ಟಿಯಾಗಿದೆ. ಜುಲೈ 25ರ ತೀರ್ಪಿಗೆ ಅನುಗುಣವಾಗಿ ತೆರಿಗೆ ವಿಧಿಸಲು ರಾಜ್ಯಗಳು ಹೊಂದಿರುವ ಅಧಿಕಾರವು ಪೂರ್ವಾನ್ವಯವಾಗಿ ಜಾರಿಗೆ ಬರುತ್ತದೆಯೋ ಅಥವಾ ಅದು ತೀರ್ಪು ಪ್ರಕಟವಾದ ದಿನದಿಂದ ಜಾರಿಗೆ ಬರುತ್ತದೆಯೋ ಎಂಬ ಪ್ರಶ್ನೆ ಕುರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು, ಗಣಿಗಾರಿಕೆಯಲ್ಲಿ ತೊಡಗಿರುವ ಕಂಪನಿಗಳು ಮಂಡಿಸಿದ ವಾದವನ್ನು ಆಲಿಸಿರುವ ಸಂವಿಧಾನ ಪೀಠವು ಈಗ ತೀರ್ಪು ಕಾಯ್ದಿರಿಸಿದೆ.

ಸಿಜೆಐ ಮಾತ್ರವೇ ಅಲ್ಲದೆ, ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್, ಅಭಯ್ ಎಸ್. ಓಕ, ಜೆ.ಬಿ. ಪಾರ್ದೀವಾಲಾ, ಮನೋಜ್ ಮಿಶ್ರಾ, ಉಜ್ವಲ್ ಭುಇಯಾಂ, ಸತೀಶ್‌ ಚಂದ್ರ ಶರ್ಮ ಮತ್ತು ಆಗಸ್ಟೀನ್ ಜಾರ್ಜ್ ಮಸೀಹ್ ಅವರೂ ಈ ಪೀಠದಲ್ಲಿದ್ದಾರೆ. 

ಕೇಂದ್ರ ಸರ್ಕಾರದ ಪರವಾಗಿ ಪೀಠದ ಎದುರು ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ‘ಜುಲೈ 25ರ ತೀರ್ಪನ್ನು ಪೂರ್ವಾನ್ವಯ ಮಾಡಿದರೆ ಜನಸಾಮಾನ್ಯರ ಮೇಲೆಯೂ ಪರಿಣಾಮ ಉಂಟಾಗುತ್ತದೆ. ಕಂಪನಿಗಳು ತಮ್ಮ ಮೇಲಿನ ಹಣಕಾಸಿನ ಹೊರೆಯನ್ನು ಜನರ ಮೇಲೆ ವರ್ಗಾಯಿಸುತ್ತವೆ’ ಎಂದರು.

ಗಣಿಗಳು ಹಾಗೂ ಖನಿಜಗಳು ಇರುವ ಭೂಪ್ರದೇಶದ ಮೇಲೆ ಕೇಂದ್ರ ಸರ್ಕಾರ 1989ರಿಂದ ವಿಧಿಸಿರುವ ರಾಯಧನವನ್ನು ತಮಗೆ ಮರಳಿಸಬೇಕು ಎಂದು ಕೆಲವು ರಾಜ್ಯಗಳು ಮಂಡಿಸಿರುವ ಕೋರಿಕೆಯನ್ನು ಕೇಂದ್ರವು ವಿರೋಧಿಸಿದೆ. ಆದರೆ ಮಧ್ಯಪ್ರದೇಶ, ರಾಜಸ್ಥಾನ (ಇಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಇದೆ) ಸೇರಿದಂತೆ ಕೆಲವು ರಾಜ್ಯಗಳು ತೀರ್ಪನ್ನು ಪೂರ್ವಾನ್ವಯ ಮಾಡುವುದು ಬೇಡ ಎಂದು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.