ADVERTISEMENT

ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಪಿಟಿಐ
Published 7 ಫೆಬ್ರುವರಿ 2026, 13:12 IST
Last Updated 7 ಫೆಬ್ರುವರಿ 2026, 13:12 IST
<div class="paragraphs"><p>&nbsp;ಮೋಹನ್&nbsp;ಭಾಗವತ್</p></div>

 ಮೋಹನ್ ಭಾಗವತ್

   

ಮುಂಬೈ: ‘ಹಿಂದೂ’ ಎಂಬ ಪದವು ನಾಮಪದವಲ್ಲ, ಅದು ವಿಶೇಷಣ. ಭಾರತದಲ್ಲಿ ವಾಸಿಸುವವರೆಲ್ಲರೂ ಹಿಂದೂಗಳೇ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್‌ ಭಾಗವತ್‌ ಹೇಳಿದ್ದಾರೆ.

ಆರ್‌ಎಸ್‌ಎಸ್‌ನ ಶತಮಾನೋತ್ಸವ ಅಂಗವಾಗಿ ಶನಿವಾರ ಇಲ್ಲಿ ಆಯೋಜಿಸಿದ್ದ ‘ಸಂಘದ 100 ವರ್ಷಗಳ ಪಯಣ ಮತ್ತು ಹೊಸ ದಿಗಂತಗಳು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.

ADVERTISEMENT

‘ಧರ್ಮನಿರಪೇಕ್ಷತೆ’ ಎಂಬುದು ತಪ್ಪು ಪದ. ‘ಪಂಥನಿರಪೇಕ್ಷತೆ’ ಎಂಬುದು ಸರಿಯಾದ ಪದ ಎಂದು ಅವರು ಗಮನ ಸೆಳೆದಿದ್ದಾರೆ.

‘ಆರ್‌ಎಸ್‌ಎಸ್‌ ಬೇರೆ ಯಾವುದೇ ಸಂಘಟನೆಯೊಂದಿಗೆ ಸ್ಪರ್ಧೆಯೊಡ್ಡಲು ಹೊರಹೊಮ್ಮಿಲ್ಲ. ಯಾವುದೇ ಸಂಘಟನೆಗೆ ಪ್ರತಿಕ್ರಿಯೆಯಾಗಿ ಅಥವಾ ವಿರೋಧವಾಗಿಯೂ ಹೊರಹೊಮ್ಮಿಲ್ಲ. ಸಂಘ (ಆರ್‌ಎಸ್‌ಎಸ್‌) ಜನಪ್ರಿಯತೆ, ಅಧಿಕಾರವನ್ನು ಬಯಸುವುದಿಲ್ಲ. ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಒಳ್ಳೆಯ ಕೆಲಸಗಳನ್ನು ಸರಿಯಾಗಿಯೇ ಮಾಡಬೇಕು ಎಂಬುದು ಸಂಘದ ಉದ್ದೇಶ’ ಎಂದಿದ್ದಾರೆ.

ಇಡೀ ಸಮಾಜವನ್ನು ಸಂಘಟಿಸುವುದನ್ನು ಹೊರತುಪಡಿಸಿ, ಬೇರೆ ಯಾವುದೇ ಕೆಲಸವಿಲ್ಲ ಎಂದು ಸಂಘವು ಆರಂಭದಿಂದಲೇ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ.

‘ಸಂಘದ ಸ್ವಯಂಸೇವಕರು ಸರ್ಕಾರದಿಂದ ಯಾವುದೇ ಹಣವನ್ನು ಪಡೆಯದೆ 1.3 ಲಕ್ಷಕ್ಕೂ ಹೆಚ್ಚು ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಸಮಾಜದ ಸಹಕಾರದೊಂದಿಗೆ ತಮ್ಮ ಸ್ವಂತ ಹಣವನ್ನು ಖರ್ಚು ಮಾಡುತ್ತಿದ್ದಾರೆ’ ಎಂದೂ ಅವರು ಹೇಳಿದ್ದಾರೆ.

ಆರ್ಥಿಕತೆ, ನ್ಯಾಯಾಂಗ, ಆಡಳಿತ, ಕಲೆ, ಕ್ರೀಡೆ, ಧರ್ಮ, ರಾಜಕೀಯ, ಕಾರ್ಪೊರೇಟ್ ವಲಯ, ಸಿನಿಮಾ ಮತ್ತು ಇತರ ಕ್ಷೇತ್ರಗಳ ಗಣ್ಯರು ಸೇರಿದಂತೆ ಆಹ್ವಾನಿತರನ್ನು ಒಟ್ಟು 10 ವರ್ಗಗಳಾಗಿ ವರ್ಗೀಕರಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್, ನಿರ್ಮಾಪಕ ಸುಭಾಷ್ ಘಾಯ್, ನಟಿ ಹಾಗೂ ಬಿಜೆಪಿ ಸಂಸದೆ ಹೇಮಾ ಮಾಲಿನಿ, ಗಾಯಕಿ ಅನುರಾಧಾ ಪೌಡ್ವಾಲ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.