ADVERTISEMENT

ನಿಂಬರಂ ವಿರುದ್ಧ ‘ಕಮಿಷನ್’ ಆರೋಪ: ಆರ್‌ಎಸ್‌ಎಸ್ ಖಂಡನೆ

ಪಿಟಿಐ
Published 1 ಜುಲೈ 2021, 18:55 IST
Last Updated 1 ಜುಲೈ 2021, 18:55 IST

ಜೈಪುರ: ಮನೆಮನೆಗಳಿಂದ ಕಸ ಸಂಗ್ರಹಿಸುತ್ತಿರುವ ಸಂಸ್ಥೆಯಿಂದ ₹ 20 ಕೋಟಿ ಕಮಿಷನ್ ಪಡೆದಿದ್ದಾರೆ ಎಂದು ಆರ್‌ಎಸ್‌ಎಸ್‌ನ ಹಿರಿಯ ನಾಯಕ ನಿಂಬರಂ ಅವರ ವಿರುದ್ಧ ಕೇಳಿಬಂದಿರುವ ಆರೋಪವನ್ನು ಆರ್‌ಎಸ್‌ಎಸ್‌ ಗುರುವಾರ ಖಂಡಿಸಿದೆ.

‘ಆರ್‌ಎಸ್‌ಎಸ್‌ನ ಪ್ರಾಂತೀಯ ಪ್ರಚಾರಕರಾಗಿರುವ ನಿಂಬರಂ ಅವರ ವಿರುದ್ಧ ಸುಳ್ಳು ಆರೋಪ ಮತ್ತು ನಿಂದನೆಗಳನ್ನು ಸೈದ್ಧಾಂತಿಕ ದುರುದ್ದೇಶಕ್ಕಾಗಿ ಮಾಡಲಾಗಿದೆ. ಈ ವಿಚಾರದಲ್ಲಿ ಕಾನೂನು ಕ್ರಮ ತೆಗೆದುಕೊಳ್ಳಲು ನಮಗೆ ಆಯ್ಕೆಗಳು ಮುಕ್ತವಾಗಿವೆ’ ಎಂದು ಆರ್‌ಎಸ್‌ಎಸ್ ಮುಖಂಡ ಹನುಮಾನ್ ಸಿಂಗ್ ರಾಥೋರ್ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಬಿವಿಜಿ ಕಂಪನಿಯವರು ಆರ್‌ಎಸ್‌ಎಸ್ ಮುಖಂಡರನ್ನು ಭೇಟಿ ಮಾಡಿ, ಉದಯ್‌ಪುರದಲ್ಲಿರುವ ಪ್ರತಾಪ್ ಗೌರವ್ ಕೇಂದ್ರದ ಅಭಿವೃದ್ಧಿಗಾಗಿ ಸಿಎಸ್‌ಆರ್ ಫಂಡ್‌ನಿಂದ ಹಣ ನೀಡುವುದಾಗಿ ಹೇಳಿದ್ದರು. ಕೇಂದ್ರಕ್ಕೆ ಒಮ್ಮೆ ಭೇಟಿ ನೀಡುವಂತೆ ಆರ್‌ಎಸ್‌ಎಸ್ ಮುಖಂಡರು ಕಂಪನಿಯವರನ್ನು ಕೇಳಿಕೊಂಡಿದ್ದರು. ಆದರೆ, ಗೊತ್ತುಪಡಿಸಿದ್ದ ದಿನಾಂಕದಂದು ಕಂಪನಿಯವರು ಕೇಂದ್ರಕ್ಕೆ ಭೇಟಿ ನೀಡಿರಲಿಲ್ಲ. ಹಾಗಾಗಿ, ಇಲ್ಲ ಸಿಎಸ್‌ಆರ್ ಫಂಡಿನ ಪ್ರಶ್ನೆಯೇ ಉದ್ಭವಿಸುವುದಿಲ್ಲ’ ಎಂದು ಆರ್‌ಎಸ್‌ಎಸ್ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಆದರೆ, ಏ. 20ರಂದು ಕಸ ಸಂಗ್ರಹಿಸುವ ಕಂಪನಿಯ ಅಧಿಕಾರಿಗಳು ಮತ್ತು ಆರ್‌ಎಸ್‌ಎಸ್ ಮುಖಂಡರು ಸೌಜನ್ಯದ ಭೇಟಿಯಾಗಿದ್ದರು’ ಎಂದೂ ಆರ್‌ಎಸ್‌ಎಸ್ ಹೇಳಿದೆ.

ಇದೇ ಪ್ರಕರಣದಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮಂಗಳವಾರ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಅಮಾನತುಗೊಂಡಿರುವ ಜೈಪುರ ಗ್ರೇಟರ್ ಮುನ್ಸಿಪಲ್ ಕಾರ್ಪೊರೇಷನ್‌ನ ಮೇಯರ್ ಮತ್ತು ಬಿಜೆಪಿ ನಾಯಕಿ ಸೌಮ್ಯ ಗುರ್ಜರ್ ಅವರ ಪತಿ ರಾಜಾರಾಂ ಗುರ್ಜರ್ ಹಾಗೂ ಬಿವಿಜಿ ಕಂಪನಿಯ ಪ್ರತಿನಿಧಿಯನ್ನು ಬಂಧಿಸಿತ್ತು.

ರಾಜಾರಾಂ ಗುರ್ಜರ್ ಮತ್ತು ಕಂಪನಿಯ ಪ್ರತಿನಿಧಿ, ಕಸ ಸಂಗ್ರಹಿಸುವ ಕಂಪನಿಯಿಂದ ₹ 20 ಕೋಟಿ ಕಮಿಷನ್‌ ಪಡೆಯುವ ಕುರಿತು ನಡೆದ ಮಾತುಕತೆಯ ವಿಡಿಯೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ವಿಡಿಯೊದಲ್ಲಿ ಆರ್‌ಎಸ್‌ಎಸ್‌ನ ಪ್ರಾಂತೀಯ ಪ್ರಚಾರ ನಿಂಬರಂ ಕೂಡಾ ಇದ್ದರು. ಹಾಗಾಗಿ, ಎಸಿಬಿ ನಿಂಬರಂ ವಿರುದ್ಧ ಪ್ರಕರಣ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.