ನವದೆಹಲಿ: ದೆಹಲಿಯ ಸರ್ಕಾರಿ ಶಾಲೆಯ ಮಕ್ಕಳಿಗೆ ನೂತನ ಶೈಕ್ಷಣಿಕ ಕಾರ್ಯಕ್ರಮ ‘ರಾಷ್ಟ್ರನೀತಿ’ ಅನ್ವಯ ಶೀಘ್ರವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಹಾಗೂ ವೀರ ಸಾವರ್ಕರ್ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬೋಧನೆ ಮಾಡಲಾಗುವುದು ಎಂದು ಶಿಕ್ಷಣ ಸಚಿವ ಆಶಿಶ್ ಸೂದ್ ಮಂಗಳವಾರ ತಿಳಿಸಿದ್ದಾರೆ.
1ರಿಂದ 12ನೇ ತರಗತಿವರೆಗಿನ ಮಕ್ಕಳಲ್ಲಿ ನಾಗರಿಕ ಪ್ರಜ್ಞೆ, ರಾಷ್ಟ್ರ ಗೌರವ, ನೈತಿಕ ಆಡಳಿತದ ಬಗ್ಗೆ ಜಾಗೃತಿ ಮೂಡಿಸಿ, ಮೂಲಭೂತ ಕರ್ತವ್ಯಗಳ ಬಗ್ಗೆ ಗಮನಹರಿಸುವಂತೆ ಮಾಡುವ ನಿಟ್ಟಿನಲ್ಲಿ ‘ರಾಷ್ಟ್ರನೀತಿ’ ಎಂಬ ಶೈಕ್ಷಣಿಕ ಕಾರ್ಯಕ್ರಮ ರೂಪಿಸಲಾಗುತ್ತಿದೆ ಎಂದು ಸೂದ್ ಹೇಳಿದ್ದಾರೆ.
ರಾಷ್ಟ್ರನೀತಿ ಅನ್ವಯ ಪಠ್ಯಕ್ರಮದಲ್ಲಿ ಆರ್‌ಎಸ್‌ಎಸ್ ಕುರಿತಂತೆ ಅಧ್ಯಾಯ ಸೇರಿಸಲಾಗುವುದು. ಅದರಲ್ಲಿ ಆರ್‌ಎಸ್‌ಎಸ್‌ನ ಮೂಲ, ಇತಿಹಾಸ, ಸಿದ್ಧಾಂತ, ಸ್ವಾತಂತ್ರ್ಯ ಹೋರಾಟದಲ್ಲಿ ಸ್ವಯಂ ಸೇವಕರ ಪಾಲ್ಗೊಳ್ಳುವಿಕೆ ಮತ್ತು ನೈಸರ್ಗಿಕ ವಿಪತ್ತಿನ ಸಂದರ್ಭದಲ್ಲಿ ಸ್ವಯಂ ಸೇವಕರ ನೆರವಿನ ಕಾರ್ಯದ ಕುರಿತಂತೆ ಮಾಹಿತಿ ನೀಡಲಾಗುತ್ತದೆ.
ಶಿಸ್ತು ಮತ್ತು ಸೇವೆಗೆ ಆರ್‌ಎಸ್‌ಎಸ್ ಕೊಡುಗೆ ಕುರಿತಾದ ಅಧ್ಯಾಯದಲ್ಲಿ ಮಾಜಿ ಪ‍್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಪ್ರಧಾನಿ ನರೇಂದ್ರ ಮೋದಿ ಅವರ ಬಗೆಗಿನ ಉಲ್ಲೇಖಗಳೂ ಇರಲಿವೆ. ಆರ್‌ಎಸ್‌ಎಸ್ ಬಗೆಗಿನ ತಪ್ಪು ಕಲ್ಪನೆಗಳನ್ನು ದೂರಗೊಳಿಸುವ ಉದ್ದೇಶವನ್ನೂ ಈ ಅಧ್ಯಾಯಗಳು ಒಳಗೊಂಡಿರಲಿವೆ ಎಂದು ಮೂಲಗಳು ತಿಳಿಸಿವೆ.
ನಮೋ ವಿದ್ಯಾ ಉತ್ಸವದ ಅಂಗವಾಗಿ ಸೆಪ್ಟೆಂಬರ್ 18ರಂದು ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತ ಅವರು 3 ಶೈಕ್ಷಣಿಕ ಪಠ್ಯಕ್ರಮಗಳನ್ನು ಘೋಷಿಸಿದ್ದರು. ಆ ಪೈಕಿ ರಾಷ್ಟ್ರನೀತಿ ಕಾರ್ಯಕ್ರಮವೂ ಒಂದಾಗಿದೆ.
ತೆರೆಮರೆಯ ನಾಯಕರು ಪಠ್ಯದಲ್ಲಿ ತೆರೆಮರೆಯ ನಾಯಕರು ಎಂಬ ಪ‍್ರತ್ಯೇಕ ವಿಭಾಗವೇ ಇರಲಿದೆ. ಇದರ ಅನ್ವಯ ವೀರ ಸಾವರ್ಕರ್ ಸುಭಾಷ್ ಚಂದ್ರ ಬೋಸ್ ಹಾಗೂ ಶ್ಯಾಮ್ ಪ್ರಸಾದ್ ಮುಖರ್ಜಿ ಸೇರಿದಂತೆ ಹಲವು ನಾಯಕರ ಬಗ್ಗೆ ವಿದ್ಯಾರ್ಥಿಗಳಿಗೆ ಪಾಠಗಳು ಇರಲಿವೆ ಎಂದು ಮೂಲಗಳು ತಿಳಿಸಿವೆ. ಈಗಾಗಲೇ ಪುಸ್ತಕಗಳು ತಯಾರಾಗಿದ್ದು ಬೋಧನೆಗೆ ಸಂಬಂಧಿಸಿದಂತೆ ಶಿಕ್ಷಕರಿಗೆ ತರಬೇತಿಯೂ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.