ಸುನಿಲ್ ಅಂಬೇಕರ್
– ಪಿಟಿಐ ಚಿತ್ರ
ಜೋಧಪುರ: ಮಣಿಪುರವು ಶಾಂತಿ ಸ್ಥಾಪನೆಯತ್ತ ಹೆಜ್ಜೆ ಇಟ್ಟಿರುವುದು ಒಳ್ಳೆಯ ಸಂಗತಿ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಭಾನುವಾರ ಅಭಿಪ್ರಾಯಪಟ್ಟಿದೆ.
ಜೋಧಪುರದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಆರ್‌ಎಸ್‌ಎಸ್ ರಾಷ್ಟ್ರೀಯ ಪ್ರಚಾರ ಉಸ್ತುವಾರಿ ಸುನಿಲ್ ಅಂಬೇಕರ್ ಅವರು, ‘ಈಶಾನ್ಯ ಭಾರತದಲ್ಲಿ ಪತ್ಯೇಕತಾವಾದಿ ಹೋರಾಟ ಮತ್ತು ಹಿಂಸಾಚಾರ ತಗ್ಗುತ್ತಿರುವುದನ್ನು ಗಮನಿಸಿದ್ದೇವೆ. ಈಗ ಅಲ್ಲಿ ಶಾಂತಿ ನೆಲಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಮಾಡಿದ ಪ್ರಯತ್ನದ ಫಲವಾಗಿ ಈ ಫಲಿತಾಂಶ ಕಾಣುತ್ತಿದ್ದೇವೆ’ ಎಂದರು.
ಇತ್ತೀಚೆಗೆ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿತ್ತು. ಈ ಬೆಳವಣಿಗೆ ಮೇಲೆ ಆರ್‌ಎಸ್‌ಎಸ್ ನಿಗಾ ಇಟ್ಟಿತ್ತು ಮತ್ತು ಕುಕಿ–ಮೈತೇಯಿ ಸಮುದಾಯಗಳನ್ನು ಒಟ್ಟಿಗೆ ತರಲು ಸತತವಾಗಿ ಪ್ರಯತ್ನಿಸಿತ್ತು. ಸದ್ಯ ಸಮುದಾಯಗಳು ಶಾಂತಿ ಸ್ಥಾಪನೆಯತ್ತ ಹೆಜ್ಜೆ ಇಟ್ಟಿವೆ. ಅದರಲ್ಲೂ ಕೇಂದ್ರ ಗೃಹ ಇಲಾಖೆಯು ಕುಕಿ ಸಮುದಾಯದೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ನಂತರದಲ್ಲಿ ಈ ಬೆಳವಣಿಗೆ ಕಾಣುತ್ತಿದ್ದೇವೆ. ಸದ್ಯ ಮೈತೇಯಿಗಳಿಗೆ ರಾಷ್ಟ್ರೀಯ ಹೆದ್ದಾರಿಯನ್ನು ಮುಕ್ತಗೊಳಿಸಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.