ADVERTISEMENT

ಇನ್ಫೊಸಿಸ್‌ನಿಂದಾಗಿ ಸರ್ಕಾರದ ವಿಶ್ವಾಸಕ್ಕೆ ಧಕ್ಕೆ: ಆರ್‌ಎಸ್‌ಎಸ್ ಮುಖವಾಣಿ ಕಿಡಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2021, 22:56 IST
Last Updated 3 ಸೆಪ್ಟೆಂಬರ್ 2021, 22:56 IST
ಇನ್ಫೊಸಿಸ್
ಇನ್ಫೊಸಿಸ್   

ನವದೆಹಲಿ: ನೂತನ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಆಗುತ್ತಿರುವ ತೊಂದರೆಗಳ ಸಂಬಂಧ ಆರ್‌ಎಸ್‌ಎಸ್ ಮುಖವಾಣಿ ‘ಪಾಂಚಜನ್ಯ’ವು, ಈ ಪೋರ್ಟಲ್ ಅಭಿವೃದ್ಧಿಪಡಿಸಿರುವ ಇನ್ಫೊಸಿಸ್ ವಿರುದ್ಧ ಕಿಡಿಕಾರಿದೆ.

ಸೆಪ್ಟೆಂಬರ್‌ 5ರ ಸಂಚಿಕೆಯಲ್ಲಿ ‘ಗೌರವ ಮತ್ತು ಆಘಾತ’ ಎಂಬ ಲೇಖನವನ್ನು ಪಾಂಚಜನ್ಯ ಪ್ರಕಟಿಸಿದೆ. ‘ತೆರಿಗೆ ಪೋರ್ಟಲ್‌ನಲ್ಲಿ ಜನರು ಎದುರಿಸುತ್ತಿರುವ ತೊಂದರೆಗಳ ಕಾರಣದಿಂದ ಇನ್ಫೊಸಿಸ್‌ನ ಗೌರವ, ಘನತೆ ಅಪಾಯದಲ್ಲಿದೆ.

'ನೂತನ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಬಹಳ ತೊಂದರೆಯಾಗಿದೆ. ಇನ್ಫೊಸಿಸ್ ಅಭಿವೃದ್ಧಿಪಡಿಸಿರುವ ಸರಕು ಮತ್ತು ಸೇವಾ ತೆರಿಗೆ ಪೋರ್ಟಲ್‌ (ಜಿಎಸ್‌ಟಿ ಪೋರ್ಟಲ್) ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರಿಂದ ಉದ್ಯಮಿಗಳಿಗೆ ಭಾರಿ ತೊಂದರೆಯಾಗಿದೆ’ ಎಂದು ಪಾಂಚಜನ್ಯ ಹರಿಹಾಯ್ದಿದೆ.

ADVERTISEMENT

ಇದು ಈ ವಾರದ ಸಂಚಿಕೆಯ ಮುಖಪುಟ ಲೇಖನವಾಗಿದ್ದು, ಮುಖಪುಟದಲ್ಲಿ ಇನ್ಫೊಸಿಸ್ ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ನಾರಾಯಣಮೂರ್ತಿ ಅವರ ಚಿತ್ರವನ್ನು ಪಾಂಚಜನ್ಯ ಪ್ರಕಟಿಸಿದೆ.

‘ಈ ಪೋರ್ಟಲ್‌ನಲ್ಲಿ ಆಗುತ್ತಿರುವ ತೊಂದರೆಯಿಂದ ಜನರು ಸರ್ಕಾರದ ಮೇಲಿನ ವಿಶ್ವಾಸವನ್ನು ಕಳೆದುಕೊಳ್ಳುತ್ತಿದ್ದಾರೆ. ಇನ್ಫೊಸಿಸ್ ಸೇವೆ ನೀಡುತ್ತಿರುವ ವಿದೇಶಗಳಲ್ಲಿ ಹೀಗೆ ಆಗಿದ್ದಿದ್ದರೆ, ಏಳುತ್ತಿದ್ದ ಪ್ರಶ್ನೆಗಳು ಅಪಾರ’ ಎಂದು ಪಾಂಚಜನ್ಯ ಹೇಳಿದೆ.

‘ಈ ಪೋರ್ಟಲ್ ಅಭಿವವೃದ್ಧಿಪಡಿಸಲು ಕರೆಯಲಾಗಿದ್ದ ಟೆಂಡರ್‌ನಲ್ಲಿ, ಇನ್ಫೊಸಿಸ್ ಅತ್ಯಂತ ಕಡಿಮೆ ಮೊತ್ತವನ್ನು ನಮೂದಿಸಿತ್ತು. ಎಲ್‌-1 ಬಿಡ್ಡರ್ ಆಗಿದ್ದ ಕಾರಣ ಸರ್ಕಾರವು ಇನ್ಫೊಸಿಸ್‌ಗೆ ಗುತ್ತಿಗೆ ನೀಡಿದೆ. ಪ್ರತಿಷ್ಠಿತ ಕಂಪನಿ ಆಗಿರುವ ಕಾರಣ ತಕ್ಷಣವೇ ಗುತ್ತಿಗೆ ನೀಡಲಾಗಿದೆ. ಆದರೆ ಪೋರ್ಟಲ್ ಸರಿಯಾಗಿ ಅಭಿವೃದ್ಧಿ ಮಾಡಿಲ್ಲ’ ಎಂದು ನಿಯತಕಾಲಿಕವು ಹೇಳಿದೆ.

ಸೆಪ್ಟೆಂಬರ್ 15ರ ಒಳಗೆ ತೊಂದರೆಗಳನ್ನು ಸರಿಪಡಿಸಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇನ್ಫೊಸಿಸ್‌ಗೆ ತಾಕೀತು ಮಾಡಿದ್ದಾರೆ.

ಎಡಪಂಥೀಯರಿಗೆ ದೇಣಿಗೆಗೆ ಆಕ್ಷೇಪ
‘ಎಡಪಂಥೀಯ ಸಂಘಟನೆಗಳು, ಫ್ಯಾಕ್ಟ್‌ಚೆಕ್‌ ಜಾಲತಾಣಗಳು ಮತ್ತು ಎಡಪಂಥೀಯ ಸುದ್ದಿ ಪೋರ್ಟಲ್‌ಗಳಿಗೆ ಇನ್ಫೊಸಿಸ್ ದೇಣಿಗೆ ನೀಡುತ್ತಿದೆ. ಇವು ಜಾತಿ ಆಧಾರಿತ ದ್ವೇಷವನ್ನು ಹುಟ್ಟುಹಾಕುತ್ತಿವೆ’ ಎಂದು ಪಾಂಚಜನ್ಯ ಕಿಡಿಕಾರಿದೆ.

‘ದೇಶ ವಿರೋಧಿ ಮತ್ತು ಅರಾಜಕತಾವಾದಿ ಸಂಘಟನೆಗಳಿಗೆ ದೇಣಿಗೆ ಏಕೆ ನೀಡುತ್ತಿದ್ದೀರಿ ಎಂದು ಇನ್ಫೊಸಿಸ್ ಪ್ರವರ್ತಕರನ್ನು ಏಕೆ ಪ್ರಶ್ನಿಸಬಾರದು’ ಎಂದು ಪ್ರಶ್ನಿಸಿದೆ.

*
ದೇಶದ ಆರ್ಥಿಕತೆಯನ್ನು ಉದ್ದೇಶಪೂರ್ವಕವಾಗಿ ಧ್ವಂಸಮಾಡಲು ಇನ್ಫೊಸಿಸ್ ಮ್ಯಾನೇಜ್‌ಮೆಂಟ್ ಯತ್ನಿಸುತ್ತಿದೆ ಎಂಬ ಆರೋಪವು ಗಟ್ಟಿಯಾಗಿ ಕೇಳುತ್ತಿದೆ.
-ಪಾಂಚಜನ್ಯ, ಆರ್‌ಎಸ್‌ಎಸ್ ಮುಖವಾಣಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.