
ಮುಂಬೈ: ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್) ಯಾರ ವಿರುದ್ಧವೂ ಇಲ್ಲ. ಅದು ಅಧಿಕಾರವನ್ನೂ ಬಯಸುವುದಿಲ್ಲ. ಸಮಾಜವನ್ನು ಒಗ್ಗೂಡಿಸುವುದು ಸಂಘದ ಉದ್ದೇಶವಾಗಿದೆ ಎಂದು ಅದರ ಮುಖ್ಯಸ್ಥ ಮೋಹನ್ ಭಾಗವತ್ ಅವರು ಶನಿವಾರ ಹೇಳಿದರು.
ಆರ್‌ಎಸ್‌ಎಸ್ ಸ್ಥಾಪಕ ಕೇಶವ ಬಲಿರಾಮ ಹೆಡ್ಗೇವಾರ್ ಅವರು ಸಮಾಜದಲ್ಲಿ ಅನೇಕ ನ್ಯೂನತೆಗಳನ್ನು ಗುರುತಿಸಿದರು. ಅದರಲ್ಲಿ ಒಗ್ಗಟ್ಟಿನ ಕೊರತೆಯೂ ಇತ್ತು. ಇದುವೇ 1925ರಲ್ಲಿ ಸಂಘವು ಸ್ಥಾಪನೆಯಾಗಲು ಪ್ರಮುಖ ಕಾರಣ ಎಂದು ಕಾರ್ಯಕ್ರಮವೊಂದರಲ್ಲಿ ಹೇಳಿದರು.
‘100 ವರ್ಷಗಳ ಸಂಘ ಪಯಣ: ಹೊಸ ಪರ್ವ’ ಶೀರ್ಷಿಕೆಯಡಿ 2 ದಿನಗಳ ಉಪನ್ಯಾಸ ಕಾರ್ಯಕ್ರಮವು ಶನಿವಾರ ಆರಂಭವಾಯಿತು. ಈ ವೇಳೆ ಭಾಗವತ್ ಮಾತನಾಡಿದರು.
‘ಸಮಾಜದ ಏಕೀಕರಣವನ್ನು ಹೊರತುಪಡಿಸಿ ಬೇರೆ ಯಾವುದೇ ಕೆಲಸವನ್ನೂ ಕೈಗೆತ್ತಿಕೊಳ್ಳುವುದಿಲ್ಲ ಎಂದು ಆರ್‌ಎಸ್‌ಎಸ್ ಬಹಳ ಹಿಂದೆಯೇ ನಿರ್ಧರಿಸಿತ್ತು. ಆ ಕಾರ್ಯವನ್ನು ಸಾಧಿಸುವುದಷ್ಟೇ ಗುರಿ. ದೇಶದಲ್ಲಿ ನಡೆಯುತ್ತಿರುವ ಸಕಾರಾತ್ಮಕ ಪ್ರಯತ್ನಗಳನ್ನು ಅದು ಬೆಂಬಲಿಸುತ್ತದೆ’ ಎಂದು ಅವರು ಹೇಳಿದರು.
‘ಆರ್‌ಎಸ್‌ಎಸ್‌ನಿಂದಾಗಿ ನರೇಂದ್ರ ಮೋದಿ ಪ್ರಧಾನಿಯಾಗಿದ್ದಾರೆ ಎಂದು ಅನೇಕರು ನಂಬಿದ್ದಾರೆ. ವಾಸ್ತವಲದಲ್ಲಿ ಮೋದಿ ರಾಜಕೀಯ ಪಕ್ಷವೊಂದನ್ನು ಮುನ್ನಡೆಸುತ್ತಾರೆ. ರಾಜಕೀಯ ಪಕ್ಷವು ಪ್ರತ್ಯೇಕ ಘಟಕವಾಗಿದ್ದು, ಅದು ಆರ್‌ಎಸ್‌ಎಸ್‌ನ ಅಂಗವಲ್ಲ’ ಎಂದು ಸ್ಪಷ್ಟನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.