ADVERTISEMENT

ಆರ್‌ಎಸ್‌ಎಸ್‌ನಿಂದ ‘ಗರ್ಭ ಸಂಸ್ಕಾರ’ ಅಭಿಯಾನ

ಪಿಟಿಐ
Published 6 ಮಾರ್ಚ್ 2023, 14:33 IST
Last Updated 6 ಮಾರ್ಚ್ 2023, 14:33 IST
..
..   

ನವದೆಹಲಿ: ‘ಗರ್ಭದಲ್ಲಿರುವ ಶಿಶುಗಳಿಗೆ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಕಲಿಸಲು ಗರ್ಭಿಣಿಯರಿಗೆ ‘ಗರ್ಭ ಸಂಸ್ಕಾರ’ ಎನ್ನುವ ಅಭಿಯಾನವನ್ನು ಆರಂಭಿಸಲಾಗಿದೆ’ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್ಎಸ್‌) ಅಂಗಸಂಸ್ಥೆಯಾದ ಸಂವರ್ಧಿನಿ ನ್ಯಾಸ್‌ನ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಾಧುರಿ ಮರಾಠೆ ಸೋಮವಾರ ಹೇಳಿದ್ದಾರೆ.

ಗರ್ಭದಲ್ಲಿರುವ ಶಿಶುಗಳಿಗೆ ಗೀತಾ ಪಠಣ, ರಾಮಾಯಣ, ಯೋಗಾಭ್ಯಾಸದ ಮೂಲಕ ಸಾಂಸ್ಕೃತಿಕ ಮೌಲ್ಯಗಳನ್ನು ಕಲಿಸಲು ಸ್ತ್ರೀರೋಗ ತಜ್ಞರು, ಆಯುರ್ವೇದ ವೈದ್ಯರು ಮತ್ತು ಯೋಗ ತರಬೇತುದಾರರೊಂದಿಗೆ ಸಂವರ್ಧಿನಿ ನ್ಯಾಸ್ ಕಾರ್ಯಕ್ರಮ ಯೋಜಿಸುತ್ತಿದೆ.

‘ಗರ್ಭಾವಸ್ಥೆಯಲ್ಲಿರುವಾಗಲೇ ಶಿಶುವು ಸಂಸ್ಕೃತಿ ಮತ್ತು ಮೌಲ್ಯವನ್ನು ಕಲಿಯುವುದು ಈ ಅಭಿಯಾನದ ಉದ್ದೇಶವಾಗಿದೆ. ಇದು ಮಗುವಿಗೆ ಎರಡು ವರ್ಷ ಆಗುವವರೆಗೆ ಈ ಪ್ರಕ್ರಿಯೆಯು ಮುಂದುವರಿಯಲಿದೆ. ‘ಗರ್ಭ ಸಂಸ್ಕಾರ’ದಲ್ಲಿ ಗೀತಾ ಶ್ಲೋಕಗಳ ಪಠಣ, ರಾಮಾಯಣದ ಸಾಲುಗಳ ಪಠಣಕ್ಕೆ ಒತ್ತು ನೀಡಲಾಗುವುದು. ಗರ್ಭದಲ್ಲಿರುವ ಶಿಶುವು 500 ಪದಗಳನ್ನು ಕಲಿಯಬಹುದು’ ಎಂದು ಮಾಧುರಿ ಮರಾಠೆ ಹೇಳಿದ್ದಾರೆ.

ADVERTISEMENT

‘ಆರ್‌ಎಸ್‌ಎಸ್‌ನ ಮಹಿಳಾ ಘಟಕವಾದ ರಾಷ್ಟ್ರ ಸೇವಿಕಾ ಸಮಿತಿಯ ಅಂಗಸಂಸ್ಥೆಯಾಗಿರುವ ಸಂವರ್ಧಿನಿ ನ್ಯಾಸ್ ಈ ಅಭಿಯಾನವನ್ನು ಕನಿಷ್ಠ ಒಂದು ಸಾವಿರ ಮಹಿಳೆಯರಿಗೆ ತಲುಪಿಸಲು ಚಿಂತನೆ ನಡೆಸಿದೆ. ಅಭಿಯಾನದ ಭಾಗವಾಗಿ, ನ್ಯಾಸ್ ಭಾನುವಾರ ನವದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಕಾರ್ಯಾಗಾರವನ್ನು ನಡೆಸಿದೆ. ಇದರಲ್ಲಿ ದೆಹಲಿ–ಏಮ್ಸ್‌ನ ಸ್ತ್ರೀರೋಗ ತಜ್ಞರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು’ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.