ADVERTISEMENT

ಟಿಎಂಸಿ ನಾಯಕರ ಪಕ್ಷಾಂತರ ಪರ್ವ: ಆರ್‌ಎಸ್‌ಎಸ್‌ಗೆ ತಲೆಬಿಸಿ

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 11:23 IST
Last Updated 16 ಜನವರಿ 2021, 11:23 IST
ದಿಲೀಪ್‌ ಘೋಷ್‌
ದಿಲೀಪ್‌ ಘೋಷ್‌   

ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ (ಟಿಎಂಸಿ) ನಾಯಕರು ಅಧಿಕ ಸಂಖ್ಯೆಯಲ್ಲಿ ಬಿಜೆಪಿ ಸೇರುತ್ತಿರುವುದು ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ (ಆರ್‌ಎಸ್‌ಎಸ್‌) ತಲೆಬಿಸಿ ಉಂಟುಮಾಡಿದೆ.

ನಾಯಕರ ಹಿನ್ನೆಲೆಯನ್ನು ಪರಿಶೀಲಿಸದೇ, ಬಂದವರಿಗೆಲ್ಲಾ ಪಕ್ಷದ ಬಾಗಿಲು ತೆರೆದರೆ ಮುಂದೆ ಸೈದ್ಧಾಂತಿಕವಾಗಿ ರಾಜಿ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು ಎಂದು ಆರ್‌ಎಸ್‌ಎಸ್‌ ಕಳವಳ ವ್ಯಕ್ತಪಡಿಸಿದೆ.

‘ಟಿಎಂಸಿ ನಾಯಕರು ದೊಡ್ಡ ಸಂಖ್ಯೆಯಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರೆ, ಪಕ್ಷದೊಳಗೆ ಪ್ರತ್ಯೇಕ ಬಣ ಸೃಷ್ಟಿಯಾಗಬಹುದು ಎಂದು ಆರ್‌ಎಸ್‌ಎಸ್‌ ಆತಂಕ ವ್ಯಕ್ತಪಡಿಸಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಂದೊಮ್ಮೆ ಬಿಜೆಪಿ ಸೋತರೆ ಇವರೆಲ್ಲಾ ಪಕ್ಷವನ್ನು ನಡು ನೀರಿನಲ್ಲಿ ಬಿಟ್ಟು ಮತ್ತೆ ಟಿಎಂಸಿ‌ಯತ್ತ ಮುಖಮಾಡಬಹುದು ಎಂಬ ಅಳುಕು ಆರ್‌ಎಸ್‌ಎಸ್‌ಗೆ ಇದೆ’ ಎಂದು ಪಶ್ಚಿಮ ಬಂಗಾಳ ರಾಜ್ಯ ಬಿಜೆಪಿಯ ಮೂಲಗಳು ತಿಳಿಸಿವೆ.

ADVERTISEMENT

‘ವಿಧಾನಸಭಾ ಚುನಾವಣೆಗೂ ಮುನ್ನ ಪಕ್ಷವನ್ನು ಬಲಪಡಿಸಬೇಕೆಂಬ ಉದ್ದೇಶದಿಂದ ಟಿಎಂಸಿ ನಾಯಕರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲಾಗುತ್ತಿದೆ. ಇಷ್ಟಾದ ಮೇಲೂ ಪಕ್ಷವು ಮುಂಬರುವ ಚುನಾವಣೆಯಲ್ಲಿ ಬಹುಮತ ಪಡೆಯದಿದ್ದರೆ ಸಾಕಷ್ಟು ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಈ ಸಂಬಂಧ ಆರ್‌ಎಸ್‌ಎಸ್‌ಗೂ ವಿವರಣೆ ನೀಡಬೇಕಾಗುತ್ತದೆ’ ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮದಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಚುನಾವಣಾ ಪ್ರಚಾರ ರ‍್ಯಾಲಿಯಲ್ಲಿ ಮಾತನಾಡಿದ್ದ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್‌ ಘೋಷ್‌ ‘ಈ ಹಿಂದೆ ನಾನು ನಂದಿಗ್ರಾಮ ಪ್ರವೇಶಿಸಲು ಮುಂದಾಗಿದ್ದಾಗ ಕೆಲವರು ತಡೆದಿದ್ದರು. ಈಗ ಅದೇ ಜನ ಸ್ವಾಗತ ಕೋರುತ್ತಿದ್ದಾರೆ’ ಎಂದಿದ್ದರು.

‘ಪಕ್ಷ ಸೇರುವವರಿಗೆ ಬೇಡ ಎನ್ನಲು ಆಗುವುದಿಲ್ಲ. ರಾಜ್ಯದಲ್ಲಿ ಪಕ್ಷ ಗಟ್ಟಿಯಾಗಿ ಬೇರೂರಬೇಕು. ಆ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು’ ಎಂದೂ ಅವರು ತಿಳಿಸಿದ್ದರು.

ಟಿಎಂಸಿ ಹಾಗೂ ಸಿಪಿಐ (ಎಂ) ಪಕ್ಷಗಳ ಪ್ರಭಾವಿ ನಾಯಕರು ಪಕ್ಷ ಸೇರಲು ಮನಸ್ಸು ಮಾಡಿದರೆ ಅವರನ್ನು ಬರಮಾಡಿಕೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ,ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.