ADVERTISEMENT

ಗುಜರಾತ್‌ ಮುಖ್ಯಮಂತ್ರಿ ವಿಜಯ ರೂಪಾಣಿ ಆರೋಗ್ಯ ಸ್ಥಿರ, 24 ಗಂಟೆ ನಿಗಾ

ಪಿಟಿಐ
Published 15 ಫೆಬ್ರುವರಿ 2021, 6:23 IST
Last Updated 15 ಫೆಬ್ರುವರಿ 2021, 6:23 IST
ವಿಜಯ ರೂಪಾಣಿ
ವಿಜಯ ರೂಪಾಣಿ   

ಅಹಮದಾಬಾದ್‌: ‘ಗುಜರಾತ್‌ ಮುಖ್ಯಮಂತ್ರಿ ವಿಜಯ ರೂಪಾಣಿ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ. ಆದರೆ ಅವರ ಆರೋಗ್ಯದ ಮೇಲೆ 24 ಗಂಟೆಗಳ ಕಾಲ ನಿಗಾ ಇರಿಸಲಾಗುವುದು’ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.

‘ಆಯಾಸ ಮತ್ತು ನಿರ್ಜಲೀಕರಣದಿಂದಾಗಿ ರೂಪಾಣಿ ಅವರು ಮೂರ್ಛೆ ಹೋಗಿದ್ದರು. ನಾವು ಸಂಪೂರ್ಣ ತಪಾಸಣೆ ಮಾಡಿದ್ದೇವೆ. ಎಲ್ಲಾ ಪರೀಕ್ಷೆಗಳ ವರದಿ ಸಾಮಾನ್ಯವಾಗಿದೆ’ ಎಂದು ಯು. ಎನ್ ಮೆಹ್ತಾ ಆಸ್ಪತ್ರೆಯ ವೈದ್ಯ ಡಾ.ಆರ್‌.ಕೆ ಪಟೇಲ್‌ ಅವರು ಮಾಹಿತಿ ನೀಡಿದರು.

‘ಮುಖ್ಯಮಂತ್ರಿಗಳ ಆರೋಗ್ಯ ಸ್ಥಿರವಾಗಿದೆ. ಅವರ ಆರೋಗ್ಯದ ಮೇಲೆ 24 ಗಂಟೆಗಳ ಕಾಲ ನಿಗಾ ಇರಿಸಲಾಗುವುದು’ ಎಂದು ಗುಜರಾತ್‌ನ ಉಪಮುಖ್ಯಮಂತ್ರಿ ನಿತಿನ್‌ ಪಟೇಲ್‌ ಅವರು ಹೇಳಿದರು.

ADVERTISEMENT

‘ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿ ಕರೆ ಮಾಡಿ ರೂಪಾಣಿ ಅವರ ಆರೋಗ್ಯ ವಿಚಾರಿಸಿದ್ದಾರೆ. ರೂಪಾಣಿ ಅವರಿಗೆ ವಿಶ್ರಾಂತಿ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದಾರೆ’ ಎಂದು ಮುಖ್ಯಮಂತ್ರಿ ಕಚೇರಿ ಹೇಳಿಕೆ ಬಿಡುಗಡೆ ಮಾಡಿದೆ.

ಭಾನುವಾರ ವಡೋದರಾದ ನಿಜಾಂಪುರ ಪ್ರದೇಶದಲ್ಲಿ ಸ್ಥಳೀಯ ಸಂಸ್ಥೆ ಚುನಾವಣಾ ರ‍್ಯಾಲಿಯನ್ನುದ್ಧೇಶಿಸಿ ಮಾತನಾಡುತ್ತಿರುವಾಗ ವಿಜಯ ರೂಪಾಣಿ ಅವರು ಕುಸಿದು ಬಿದ್ದಿದ್ದರು.ತಕ್ಷಣವೇ ಅವರನ್ನು ಅಹಮದಾಬಾದ್‌ಗೆ ಕರೆದೊಯ್ಯಲಾಯಿತು. ಬಳಿಕ ಅವರನ್ನು ಯು. ಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.