ವಿಜಯ ರೂಪಾನಿ
ಅಹಮದಾಬಾದ್: ಏರ್ ಇಂಡಿಯಾ ವಿಮಾನ ಪತನಗೊಂಡು ಮೃತಪಟ್ಟಿರುವ ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ ರೂಪಾನಿ ಅವರು ಶಾಂತ ಸ್ವಭಾವ ಹಾಗೂ ಸಮಾಧಾನದಿಂದ ಕೂಡಿದ ವರ್ತನೆಗೆ ಹೆಸರಾಗಿದ್ದರು.
2016ರ ಆಗಸ್ಟ್‌ನಿಂದ 2021ರ ಸೆಪ್ಟೆಂಬರ್‌ವರೆಗೆ ಮುಖ್ಯಮಂತ್ರಿಯಾಗಿದ್ದ ಅವರು, ಆಡಳಿತದ ಮೇಲೆ ಪ್ರಬಲ ಹಿಡಿತ ಹೊಂದಿದ್ದರು. ಕೋವಿಡ್–19 ಪಿಡುಗಿನಿಂದ ರಾಜ್ಯವು ಚೇತರಿಸಿಕೊಳ್ಳುತ್ತಿದ್ದ ಸಮಯದಲ್ಲಿ ಅವರು ಸರ್ಕಾರದ ನೇತೃತ್ವ ವಹಿಸಿದ್ದರು. ಆ ಕ್ಲಿಷ್ಟಕರ ಸಂದರ್ಭವನ್ನು ನಿಭಾಯಿಸುವ ಮೂಲಕ ರೂಪಾನಿ ಗಮನ ಸೆಳೆದಿದ್ದರು.
ಕಾಲೇಜು ದಿನಗಳಲ್ಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ(ಎಬಿವಿಪಿ) ಸಕ್ರಿಯ ಕಾರ್ಯಕರ್ತರಾಗಿದ್ದ ಅವರು, ಹಲವು ಹೋರಾಟಗಳನ್ನು ಸಂಘಟಿಸುವ ಮೂಲಕ ವಿದ್ಯಾರ್ಥಿ ನಾಯಕರಾಗಿ ಹೊರಹೊಮ್ಮಿದ್ದರು. ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯಲ್ಲಿ ಪಾಲ್ಗೊಂಡಿದ್ದಕ್ಕಾಗಿ 1975ರಲ್ಲಿ ಅವರನ್ನು ಒಂದು ವರ್ಷ ಭಾವನಗರ ಜೈಲಿನಲ್ಲಿ ಇರಿಸಲಾಗಿತ್ತು.
1987ರಲ್ಲಿ ರಾಜಕೀಯಕ್ಕೆ ಪದಾರ್ಪಣೆ ಮಾಡಿದ್ದ ಅವರು, ರಾಜ್ ನಗರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದರು. ನಂತರ, ಮೇಯರ್ ಆಗಿಯೂ ಕಾರ್ಯನಿರ್ವಹಿಸಿದ್ದರು. 2006 ಹಾಗೂ 2012 ನಡುವೆ ರಾಜ್ಯಸಭಾ ಸಂಸದರಾಗಿದ್ದರು.
ಗುಜರಾತ್ ಮುಖ್ಯಮಂತ್ರಿಯಾಗಿದ್ಧಾಗ, ರೂಪಾನಿ ಅವರು 2020ರಲ್ಲಿ ನೂತನ ಕೈಗಾರಿಕೆ ನೀತಿ ಜಾರಿಗೊಳಿಸಿದ್ದರು. ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದ ವೇಳೆ, 2021ರ ಸೆಪ್ಟೆಂಬರ್‌ನಲ್ಲಿ ಅಧಿಕಾರ ತ್ಯಜಿಸಿದ್ದರು. ಆಗ, ಭೂಪೇಂದ್ರ ಪಟೇಲ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.