
ನವದೆಹಲಿ: ಸಶಸ್ತ್ರ ಪಡೆಗಳಿಗೆ ಅಗತ್ಯವಿರುವ ಬಿಡಿಭಾಗಗಳು ಹಾಗೂ ಇತರ ಸಾಧನಗಳನ್ನು ಸ್ಥಳೀಯವಾಗಿಯೇ ತಯಾರಿಸಲು ಉಭಯ ದೇಶಗಳ ಸಹಭಾಗಿತ್ವದ ಕಂಪನಿಗಳನ್ನು ಸ್ಥಾಪಿಸಲು ರಷ್ಯಾ ಶುಕ್ರವಾರ ಸಮ್ಮತಿಸಿದೆ.
‘ತಂತ್ರಜ್ಞಾನ ವರ್ಗಾವಣೆ’ ಹಾಗೂ ‘ಮೂರನೇ ಮಿತ್ರ ರಾಷ್ಟ್ರಗಳ ನಡುವೆ ಪರಸ್ಪರ ನೆರವು’ ತತ್ವದಡಿ, ರಕ್ಷಣಾ ಸಾಮಗ್ರಿಗಳನ್ನು ಭಾರತಕ್ಕೆ ರಫ್ತು ಮಾಡುವುದಕ್ಕೂ ರಷ್ಯಾ ಒಪ್ಪಿಗೆ ನೀಡಿದೆ. ಆದರೆ, ಭಾರತದಲ್ಲಿ ತಯಾರಿಸಲಾಗುವ ಮಿಲಿಟರಿ ಸಾಮಗ್ರಿಗಳ ಕುರಿತ ವಿವರಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.
‘ರಕ್ಷಣಾ ಕ್ಷೇತ್ರದ ಬಿಡಿಭಾಗಗಳು/ಸಾಧನಗಳನ್ನು ಭಾರತದಲ್ಲಿ ತಯಾರಿಸಬೇಕು ಹಾಗೂ ರಷ್ಯಾದಲ್ಲಿ ತಯಾರಾಗಿರುವ ಶಸ್ತ್ರಾಸ್ತ್ರಗಳ ನಿರ್ವಹಣೆಯನ್ನು ಮೇಕ್–ಇನ್–ಇಂಡಿಯಾ ಅಡಿ ಕೈಗೊಳ್ಳಬೇಕು ಎಂಬುದು ಒಳಗೊಂಡಂತೆ ಭಾರತೀಯ ಸಶಸ್ತ್ರ ಪಡೆಗಳ ಅಗತ್ಯಗಳನ್ನು ಪೂರೈಸುವುದಕ್ಕೆ ಸಹಭಾಗಿತ್ವದ ಕಂಪನಿಗಳನ್ನು ಸ್ಥಾಪಿಸಲಾಗುತ್ತದೆ’ ಎಂದು ಮೋದಿ–ಪುಟಿನ್ ಸಭೆ ಬಳಿಕ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಹಸ್ಯವಾಗಿ ಕಾರ್ಯಾಚರಣೆ ನಡೆಸಬಲ್ಲ 5ನೇ ತಲೆಮಾರಿನ ಎಸ್‌ಯು–57 ಯುದ್ಧವಿಮಾನಗಳನ್ನು ಭಾರತದಲ್ಲಿ ತಯಾರಿಸುವ ಪ್ರಸ್ತಾವವನ್ನು ರಷ್ಯಾ ಮುಂದಿಟ್ಟಿದೆ ಎಂದು ರಷ್ಯಾ ಸರ್ಕಾರ ಒಡೆತನದ ಸುದ್ದಿಸಂಸ್ಥೆ ಟಿಎಎಸ್‌ಎಸ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.