ವಾಷಿಂಗ್ಟನ್: ‘ತೈಲ ಖರೀದಿ ಕಾರ್ಯತಂತ್ರ’ದ ಮೂಲಕ ಭಾರತವು, ರಷ್ಯಾಕ್ಕೆ ಅಕ್ರಮವಾಗಿ ಹಣಕಾಸಿನ ನೆರವು ಒದಗಿಸುತ್ತಿದೆ’ ಎಂದು ಶ್ವೇತ ಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಆರೋಪಿಸಿದ್ದಾರೆ.
‘ಭಾರತದ ತೈಲ ಖರೀದಿ ಲಾಬಿಯ ಅಕ್ರಮ ಹಣವನ್ನು ಉಕ್ರೇನ್ ವಿರುದ್ಧದ ಯುದ್ಧಕ್ಕೆ ರಷ್ಯಾ ಬಳಸಿಕೊಳ್ಳುತ್ತಿದೆ. ಭಾರತವು ರಷ್ಯಾದಿಂದ ಶಸ್ತ್ರಾಸ್ತ್ರ ಖರೀದಿಸುತ್ತದೆ. ಇನ್ನೊಂದೆಡೆ ಅಮೆರಿಕದ ಉದ್ಯಮಿಗಳಿಗೆ ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪಿಸುವಂತೆ, ಸೂಕ್ಷ್ಮವಾದ ಸೇನಾ ತಂತ್ರಜ್ಞಾನ ವರ್ಗಾಯಿಸುವಂತೆ ಭಾರತ ಒತ್ತಾಯಿಸುತ್ತಿದೆ. ರಷ್ಯಾದ ಆಡಳಿತ ಕಚೇರಿ ಕ್ರೆಮ್ಲಿನ್ ಪಾಲಿಗೆ, ಭಾರತವು ತೈಲ ಖರೀದಿ ಅಕ್ರಮ ಹಣದ ಶುದ್ಧೀಕರಣ ಕೇಂದ್ರವಾಗಿದೆ’ ಎಂದು ನವರೊ ದೂರಿದ್ದಾರೆ.
ಹೆಚ್ಚುವರಿ ಸುಂಕ ಸೇರಿ ಅಮೆರಿಕವು ಭಾರತದ ಮೇಲೆ ಹೇರಿರುವ ಶೇ 50ರಷ್ಟು ಸುಂಕವು ಬುಧವಾರದಿಂದ ಜಾರಿಗೆ ಬಂದಿದ್ದು, ಇದಕ್ಕೆ ಪ್ರತಿಕ್ರಿಯಿಸಿರುವ ನವರೊ, ‘ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತವು, ಅಮೆರಿಕದ ಕಾರ್ಯತಂತ್ರದ ಪಾಲುದಾರ ದೇಶವಾಗಿ ಇರಲು ಬಯಸಿದರೆ, ಅದಕ್ಕೆ ತಕ್ಕಂತೆ ವರ್ತಿಸಬೇಕು’ ಎಂದಿದ್ದಾರೆ.
ಉಕ್ರೇನ್ ಮೇಲೆ ನಡೆಯುತ್ತಿರುವುದು ‘ಮೋದಿ ಅವರ ಯುದ್ಧ’ ಎಂದು ನವರೊ ಬುಧವಾರ ‘ಬ್ಲೂಮ್‌ಬರ್ಗ್’ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅಭಿಪ್ರಾಯಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.