ADVERTISEMENT

ನವೀನ್‌ ಶವವನ್ನು ಭಾರತಕ್ಕೆ ಕರೆತರುವ ಕುರಿತು ಬೆಲ್ಲದ ಹೇಳಿಕೆ: ಸುರ್ಜೇವಾಲ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಮಾರ್ಚ್ 2022, 13:49 IST
Last Updated 4 ಮಾರ್ಚ್ 2022, 13:49 IST
ರಣದೀಪ್‌ ಸಿಂಗ್‌ ಸುರ್ಜೇವಾಲ
ರಣದೀಪ್‌ ಸಿಂಗ್‌ ಸುರ್ಜೇವಾಲ   

ಬೆಂಗಳೂರು: ಕ್ರೌರ್ಯ ಮತ್ತು ಸಂವೇದನಾಹೀನತೆ ಬಿಜೆಪಿಯ ಡಿಎನ್‌ಎ ಆಗಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ ವಾಗ್ದಾಳಿ ನಡೆಸಿದ್ದಾರೆ.

ಉಕ್ರೇನ್‌ನಲ್ಲಿ ಮೃತಪಟ್ಟ ವಿದ್ಯಾರ್ಥಿ ನವೀನ್‌ ಶವವನ್ನು ಭಾರತಕ್ಕೆ ಕರೆತರುವ ಕುರಿತು ಬಿಜೆಪಿ ಶಾಸಕ ಅರವಿಂದ ಬೆಲ್ಲದ ನೀಡಿರುವ ಹೇಳಿಕೆಗೆ ಸುರ್ಜೇವಾಲ ಕಿಡಿಕಾರಿದ್ದಾರೆ.

ಇದೇ ವೇಳೆ ಕೇಂದ್ರ ಸಚಿವ ಜೋಶಿ ಅವರು ಉಕ್ರೇನ್‌ನಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳ ಕುರಿತು ನೀಡಿರುವ ಹೇಳಿಕೆಗೂ ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

ಈ ವಿಚಾರವಾಗಿ ಶುಕ್ರವಾರ ಟ್ವೀಟ್ ಮಾಡಿರುವ ಅವರು, ‘ಹೃದಯಹೀನ ಬಿಜೆಪಿ ನಾಯಕರಿಗೆ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಬಿಜೆಪಿ ನಾಯಕರಿಗೆ ದುರಹಂಕಾರದ ಅಮಲು, ಅಧಿಕಾರದ ಮದ ನೆತ್ತಿಗೇರಿದೆ’ ಎಂದು ಟೀಕಿಸಿದ್ದಾರೆ.

‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉಕ್ರೇನ್‌ನಲ್ಲಿರುವ ಮಕ್ಕಳನ್ನು ‘ನೀಟ್‌ನಲ್ಲಿ ವಿಫಲರಾದವರು’ ಎಂದು ಕರೆಯುತ್ತಾರೆ. ಬಿಜೆಪಿ ಶಾಸಕ ಅರವಿಂದ ಬೆಲ್ಲದ್‌ ಸಮತೋಲನ ಕಳೆದುಕೊಂದಿದ್ದಾರೆ’ ಎಂದು ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂವೇದನಾಹೀನತೆ ಮತ್ತು ಕ್ರೌರ್ಯ ಬಿಜೆಪಿಯ ಡಿಎನ್‌ಎ ಆಗಿದೆ ಎಂದೂ ಅವರು ಹೇಳಿದ್ದಾರೆ.

‘ವಿದೇಶದಲ್ಲಿ ವೈದ್ಯಕೀಯ ಪದವಿಯನ್ನು ಪಡೆದು ಬರುವ ಶೇ 90ರಷ್ಟು ವಿದ್ಯಾರ್ಥಿಗಳು ಇಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಲು ಅಗತ್ಯವಿರುವ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದಿಲ್ಲ’ ಎಂದು ಜೋಶಿ ಹೇಳಿದ್ದರು.

ಹಾವೇರಿಯ ವಿದ್ಯಾರ್ಥಿ ನವೀನ್‌ ಮೃತದೇಹವನ್ನು ಭಾರತಕ್ಕೆ ಕರೆತರುವ ಕುರಿತು ಅರವಿಂದ ಬೆಲ್ಲದ ವಿವಾದಾತ್ಮಕ ಹೇಳಿಕೆ ನೀಡಿದ್ದರು. ‘ವಿಮಾನದಲ್ಲಿ ಮೃತದೇಹವನ್ನು ತೆಗೆದುಕೊಂಡು ಬರಬೇಕೆಂದರೆ ಹೆಚ್ಚು ಜಾಗ ಬೇಕು. ಅದೇ ಜಾಗದಲ್ಲಿ ಜೀವಂತ ಇರುವ ಎಂಟತ್ತು ಜನರನ್ನು ಕರೆತರಬಹುದು’ ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.