ADVERTISEMENT

ವಿಶ್ವದಲ್ಲಿ ಶಾಂತಿ ಸ್ಥಾಪನೆಗೆ ಭಾರತದ ತತ್ವ ಪಾಲಿಸಲು ರಾಜನಾಥ್ ಸಿಂಗ್ ಕರೆ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2022, 13:04 IST
Last Updated 27 ಫೆಬ್ರುವರಿ 2022, 13:04 IST
ರಕ್ಷಣಾ ಸಚಿವ ರಾಜನಾಥ್ ಸಿಂಗ್
ರಕ್ಷಣಾ ಸಚಿವ ರಾಜನಾಥ್ ಸಿಂಗ್   

ಬೈರಿಯಾ: ಭಾರತ ಇದುವರೆಗೆ ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ. ವಿಶ್ವ ಶಾಂತಿಗಾಗಿ ಎಲ್ಲ ದೇಶಗಳು ಈ ತತ್ವ ಅಳವಡಿಸಿಕೊಳ್ಳುವುದು ಮುಖ್ಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕರೆ ನೀಡಿದ್ದಾರೆ.

ಉತ್ತರ ಪ್ರದೇಶದ ಬೈರಿಯಾದಲ್ಲಿ ನಡೆದ ಸಾರ್ವಜನಿಕ ಸಮಾವೇಶದಲ್ಲಿ ಪಾಲ್ಗೊಂಡ ಸಿಂಗ್‌,ಉಕ್ರೇನ್–ರಷ್ಯಾ ಸಂಘರ್ಷಕ್ಕೆ ಸಂಬಂಧಿಸಿದಂತೆ ಮಾತನಾಡಿದರು.ಹಾಗೆಯೇ, ಸಂಘರ್ಷದ ಸಮಯದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪಾತ್ರದ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

'ಉಕ್ರೇನ್‌ನಲ್ಲಿ ಏನೇ ಆಗುತ್ತಿರಲಿ, ನಾವು ಶಾಂತಿ ಬಯಸುತ್ತೇವೆ. ರಷ್ಯಾ–ಉಕ್ರೇನ್ ವಿಚಾರವಾಗಿ ಪ್ರಧಾನಿ ಮೋದಿ ನಡೆಯನ್ನು ಶ್ಲಾಘಿಸಲು ಪದಗಳು ಸಾಲುತ್ತಿಲ್ಲ.ಭಾರತ ಯಾವುದೇ ದೇಶದ ಮೇಲೆ ಆಕ್ರಮಣ ಮಾಡಿಲ್ಲ. ವಿಶ್ವ ಶಾಂತಿಗಾಗಿ ಪ್ರತಿಯೊಬ್ಬರೂ (ಪ್ರತಿ ದೇಶವೂ) ಈ ತತ್ವವನ್ನು ಪಾಲಿಸಬೇಕು ಎಂದು ನಾವು ಆಶಿಸುತ್ತೇವೆ' ಎಂದು ಹೇಳಿದ್ದಾರೆ.

ADVERTISEMENT

ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಸರ್ಕಾರ ರಚಿಸಿದರೆ ಹೋಳಿ ಮತ್ತು ದೀಪಾವಳಿ ಪ್ರಯುಕ್ತ ಜನರಿಗೆ ಉಚಿತವಾಗಿ ಒಂದು ಅಡುಗೆ ಅನಿಲ ಸಿಲಿಂಡರ್‌ ನೀಡಲಾಗುವುದು ಎಂದೂ ಇದೇವೇಳೆ ಆಶ್ವಾಸನೆ ನೀಡಿದ್ದಾರೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದ ಪ್ರಧಾನಿ ಮೋದಿ, ಶಾಂತಿಯುತ ಮಾತುಕತೆ ಮೂಲಕ ಉಕ್ರೇನ್ ಜೊತೆಗಿನ ಬಿಕ್ಕಟ್ಟು ಶಮನ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದ್ದರು.

403 ಸದಸ್ಯ ಬಲದ ಉತ್ತರ ಪ್ರದೇಶ ವಿಧಾನಸಭೆಗೆ 7 ಹಂತಗಳಲ್ಲಿ ಚುನಾವಣೆ ನಡೆಯುತ್ತಿದೆ.

ಇಂದು (ಫೆಬ್ರುವರಿ 27)ಅಯೋಧ್ಯೆ, ಸುಲ್ತಾನಪುರ, ಚಿತ್ರಕೂಟ, ಪ್ರತಾಪಗಡ, ಕೌಶಂಬಿ, ಪ್ರಯಾಗರಾಜ್, ಬಾರಾಬಂಕಿ, ಬಹ್ರೇಚ್, ಶ್ರವಸ್ತಿ, ಗೊಂಡಾ, ಅಮೇಥಿ ಮತ್ತು ರಾಯಬರೇಲಿ ಜಿಲ್ಲೆಗಳ 61 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, 692 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಸದ್ಯ 5 ಹಂತಗಳ (ಫೆಬ್ರುವರಿ 10, 14,20, 23 ಮತ್ತು 27ರಂದು) ಮತದಾನ ಪ್ರಕ್ರಿಯೆ ಮುಗಿದಿದೆ. ಮಾರ್ಚ್‌ 3 ಮತ್ತು 7ರಂದು ಉಳಿದ ಎರಡು ಹಂತಗಳ ಮತದಾನ ನಡೆಯಲಿದೆ.

ಮಾರ್ಚ್‌ 10 ರಂದು ಫಲಿತಾಂಶ ಪ್ರಕಟವಾಗಲಿದೆ.

ಕಳೆದ (2017ರ) ವಿಧಾನ ಚುನಾವಣೆಯಲ್ಲಿ ಬಿಜೆಪಿ 312 ಸ್ಥಾನಗಳನ್ನು ಗೆದ್ದಿತ್ತು. ಎಸ್‌ಪಿ 47, ಬಿಎಸ್‌ಪಿ 19 ಕ್ಷೇತ್ರಗಳಲ್ಲಿ ಜಯ ಕಂಡರೆ, ಕಾಂಗ್ರೆಸ್ ಕೇವಲ 7 ಕಡೆ ಖಾತೆ ತೆರೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.