ADVERTISEMENT

‘ರಷ್ಯಾದ ಕೋವಿಡ್‌ ಲಸಿಕೆ ಪರಿಣಾಮಕಾರಿ’

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2020, 20:47 IST
Last Updated 4 ಸೆಪ್ಟೆಂಬರ್ 2020, 20:47 IST
ಕೋವಿಡ್-19 ಲಸಿಕೆ
ಕೋವಿಡ್-19 ಲಸಿಕೆ   

ನವದೆಹಲಿ: ಕೋವಿಡ್‌ ವಿರುದ್ಧ ರಷ್ಯಾ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್‌–ವಿ ಲಸಿಕೆಯು ಬಳಕೆಗೆ ಸುರಕ್ಷಿತ ಮತ್ತು ಕೊರೊನಾ ವೈರಾಣು ವಿರುದ್ಧ ಪ್ರತಿರೋಧ ಶಕ್ತಿಯನ್ನು 21 ದಿನಗಳಲ್ಲಿ ಹೆಚ್ಚಿಸುತ್ತದೆ ಎಂಬುದು ಪ್ರಯೋಗದಿಂದ ತಿಳಿದು ಬಂದಿದೆ. ಕೋವಿಡ್‌ ಪಿಡುಗಿನ ಸಂಕಷ್ಟದ ಸಮಯದಲ್ಲಿ ಇದು ಭಾರಿ ಭರವಸೆ ಮೂಡಿದೆ.

ಈ ಲಸಿಕೆಯ ಪ್ರಯೋಗ ಮತ್ತು ಭಾರಿ ಪ್ರಮಾಣದಲ್ಲಿ ತಯಾರಿಕೆಗೆ ಕೈಜೋಡಿಸಬೇಕು ಎಂದು ರಷ್ಯಾವು ಭಾರತವನ್ನು ಈ ಹಿಂದೆಯೇ ಕೋರಿತ್ತು.

76 ವ್ಯಕ್ತಿಗಳ ಮೇಲೆ ಆರಂಭಿಕ ಪ್ರಯೋಗ ನಡೆಸಲಾಗಿದೆ. 42 ದಿನಗಳಲ್ಲಿ ಇವರಲ್ಲಿ ಯಾವುದೇ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ. ಹಾಗಾಗಿ, ಲಸಿಕೆಯು ಸುರಕ್ಷಿತವಾಗಿದೆ ಎಂಬುದು ಸಾಬೀತಾಗಿದೆ. ಅದಲ್ಲದೆ, ಪ್ರಯೋಗಕ್ಕೆ ಒಳಗಾದ ಎಲ್ಲರಲ್ಲಿಯೂ 21 ದಿನಗಳೊಳಗೆ ಪ್ರತಿರೋಧ ಶಕ್ತಿ ಹೆಚ್ಚಳವಾಗಿದೆ. ಈ ಲಸಿಕೆಯು ಕೊರೊನಾ ವೈರಾಣುವಿನಿಂದ ದೀರ್ಘಾವಧಿ ರಕ್ಷಣೆ ನೀಡುವ ಸಾಧ್ಯತೆಯ ಸುಳಿವೂ ಸಿಕ್ಕಿದೆ.

ADVERTISEMENT

ಆರಂಭಿಕ ಹಂತದ ಪ್ರಯೋಗದ ಫಲಿತಾಂಶವನ್ನು ‘ಲ್ಯಾನ್ಸೆಟ್‌’ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ.

ಹೆಚ್ಚಿನ ಸಂಖ್ಯೆಯ ಜನರಿಗೆ ಲಸಿಕೆ ನೀಡಿ ದೀರ್ಘಾವಧಿ ಪ್ರಯೋಗ, ಲಸಿಕೆ ಹೋಲಿಕೆ ಪ್ರಕ್ರಿಯೆ ನಡೆಯಬೇಕಿದೆ. ದೀರ್ಘಾವಧಿಯಲ್ಲಿಯೂ ಲಸಿಕೆ ಸುರಕ್ಷಿತ ಮತ್ತು ಕೋವಿಡ್‌ನಿಂದ ಸುರಕ್ಷತೆ ಒದಗಿಸುತ್ತದೆ ಎಂಬುದನ್ನು ಸಾಬೀತು ಮಾಡಬೇಕಿದೆ.

ಕಳೆದ ಕೆಲ ತಿಂಗಳಲ್ಲಿ ಸ್ಪುಟ್ನಿಕ್‌–ವಿ ಲಸಿಕೆಯ ಬಗ್ಗೆ ಭಾರಿ ವಿವಾದ ಸೃಷ್ಟಿಯಾಗಿತ್ತು. ಕೋವಿಡ್ ವಿರುದ್ಧ ಜಗತ್ತಿನ ಮೊದಲ ಲಸಿಕೆಯನ್ನು ಅಭಿವೃದ್ಧಿಪಡಿಸಿದ್ದಾಗಿ ರಷ್ಯಾ ಘೋಷಿಸಿತ್ತು. ಆದರೆ, ಮೂರು ಹಂತಗಳ ಪ್ರಯೋಗವನ್ನು ನಡೆಸದೆಯೇ ಆತುರ ತೋರಲಾಗಿದೆ ಎಂದು ಪರಿಣತರು ಆಕ್ಷೇಪ ವ್ಯಕ್ತಪಡಿಸಿದ್ದರು.

ತಮ್ಮ ಮಗಳಿಗೆ ಲಸಿಕೆ ನೀಡಲಾಗಿದೆ, ಅದು ಪರಿಣಾಮಕಾರಿಯಾಗಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರೇ ಹೇಳಿದ್ದರು.

‘ಎರಡನೇ ಹಂತದಲ್ಲಿ 40 ಸ್ವಯಂಸೇವಕರು ಮಾತ್ರ ಭಾಗಿಯಾಗಿದ್ದಾರೆ. ಈ ಸಂಖ್ಯೆ ಬಹಳ ಚಿಕ್ಕದು. ಇದನ್ನು ಬಿಟ್ಟರೆ, ಲಸಿಕೆಯು ಸಾಕಷ್ಟು ಪರಿಣಾಮಕಾರಿ ಅನ್ನಿಸುತ್ತದೆ’ ಎಂದು ವೆಲ್‌ಕಮ್‌ ಟ್ರಸ್ಟ್‌ನ ಬಯೊಟೆಕ್ನಾಲಜಿ ವಿಭಾಗದ ಹಿರಿಯ ಸೋಂಕು ಶಾಸ್ತ್ರಜ್ಞ ಶಾಹಿದ್‌ ಜಮೀಲ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.