
ನವದೆಹಲಿ: ತಮಿಳನಾಡಿನ ಕೂಡಂಕುಳಂನಲ್ಲಿರುವ ಅಣು ವಿದ್ಯುತ್ ಸ್ಥಾವರದ ಮೂರನೇ ರಿಯಾಕ್ಟರ್‌ಗೆ ಮೊದಲ ಹಂತದ ಪರಮಾಣು ಇಂಧನವನ್ನು ಪೂರೈಕೆ ಮಾಡಿದ್ದಾಗಿ ರಷ್ಯಾದ ಅಣುಶಕ್ತಿ ನಿಗಮ ರೊಸಾಟಮ್ ಹೇಳಿದೆ.
ನೊವೊಸಿಬಿರ್‌ಸ್ಕ್ ಕೆಮಿಕಲ್ ಕಾನ್ಸ್‌ಸೆಂಟ್ರೇಟ್ಸ್ ಪ್ಲಾಂಟ್ ತಯಾರಿಸಿರುವ ಪರಮಾಣು ಇಂಧನವನ್ನು ರೊಸಾಟಮ್‌ನ ಸರಕು ಸಾಗಣೆ ವಿಮಾನವು ಕೂಡಂಕುಳಂನಲ್ಲಿರುವ ಸ್ಥಾವರಕ್ಕೆ ತಲುಪಿಸಿದೆ ಎಂದು ರೊಸಾಟಮ್ ಪ್ರಕಟಣೆಯಲ್ಲಿ ತಿಳಿಸಿದೆ.
ಒಟ್ಟು 7 ವಿಮಾನಗಳು ಈ ಅಣು ವಿದ್ಯುತ್ ಸ್ಥಾವರಕ್ಕೆ ಇಂಧನ ಪೂರೈಕೆ ಮಾಡಲಿವೆ ಎಂದೂ ತಿಳಿಸಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಭಾರತಕ್ಕೆ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಸಂದರ್ಭದಲ್ಲಿಯೇ ಈ ಪರಮಾಣು ಇಂಧನ ಪೂರೈಕೆಯಾಗಿರುವುದು ಗಮನಾರ್ಹ.
ಈ ಪರಮಾಣು ಇಂಧನ ಪೂರೈಕೆ ಸಂಬಂಧ ಉಭಯ ದೇಶಗಳ ನಡುವೆ 2024ರಲ್ಲಿ ಒಪ್ಪಂದವಾಗಿತ್ತು. ಈ ಒಪ್ಪಂದದಡಿ ಪೂರೈಸಲಾಗುವ ಇಂಧನವನ್ನು ಕೂಡಂಕುಳಂ ಸ್ಥಾವರದಲ್ಲಿರುವ 3 ಮತ್ತು 4ನೇ ರಿಯಾಕ್ಟರ್‌ಗೆ ಬಳಸಲಾಗುತ್ತದೆ.
ಈ ಸ್ಥಾವರದಲ್ಲಿ ಒಟ್ಟು 6 ರಿಯಾಕ್ಟರ್‌ಗಳನ್ನು(ವಿವಿಇಆರ್–1000) ನಿರ್ಮಿಸಲಾಗುತ್ತಿದ್ದು, ಇವುಗಳಿಂದ ಒಟ್ಟು 6 ಸಾವಿರ ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಲಾಗಿದೆ.
ಈಗಾಗಲೇ ಎರಡು ರಿಯಾಕ್ಟರ್‌ಗಳು ಕಾರ್ಯಾರಂಭ ಮಾಡಿವೆ. ಉಳಿದ ನಾಲ್ಕು ರಿಯಾಕ್ಟರ್‌ಗಳ ನಿರ್ಮಾಣ ಪ್ರಗತಿಯಲ್ಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.