ನವದೆಹಲಿ:ಶಬರಿಮಲೆ ದೇವಾಲಯವನ್ನು ಪ್ರವೇಶಿಸುವ ಮುನ್ನ 41 ದಿನಗಳ ವ್ರತ ಆಚರಿಸಬೇಕು ಎಂಬ ದೇವಸ್ವಂ ಮಂಡಳಿಯ ಷರತ್ತನ್ನು ಪಾಲಿಸುವುದು ಅಸಾಧ್ಯ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ಇರುವ ನಿಷೇಧವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸಂವಿಧಾನ ಪೀಠವು ನಡೆಸುತ್ತಿದೆ.
‘ದೇವಾಲಯಕ್ಕೆ ಎಲ್ಲಾ ಧರ್ಮದ, ಜಾತಿಗಳ ಜನರೂ ಪ್ರವೇಶಿಸಬಹುದು. ಆದರೆ ಮಹಿಳೆಯರು ಋತುಮತಿಯಾಗುವ ಕಾರಣ 41 ದಿನಗಳ ವ್ರತ ಆಚರಿಸಲು ಸಾಧ್ಯವಿಲ್ಲ. ಹೀಗಾಗಿಯೇ ನಿಗದಿತ ವಯಸ್ಸಿನ ಮಹಿಳೆಯರು ದೇವಾಲಯ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ’ ಎಂದು ದೇವಸ್ವಂ ಮಂಡಳಿ ಪರ ಹಾಜರಿದ್ದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದರು.
‘ಪಾಲಿಸಲು ಅಸಾಧ್ಯವಾದ ಷರತ್ತನ್ನು ಒಡ್ಡಲಾಗುತ್ತಿದೆ. ಕಾನೂನಿನ ಮೂಲಕ ಜಾರಿಗೆ ತರಲು ಸಾಧ್ಯವಾಗದ್ದನ್ನು, ಷರತ್ತು ವಿಧಿಸುವ ಮೂಲಕ ಹೇರಲಾಗುತ್ತಿದೆ’ ಎಂದು ಪೀಠ ಹೇಳಿದೆ.
**
ಕಾಂಗ್ರೆಸ್‌ಗೆ ಹಾನಿ
ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿಷೇಧವನ್ನು ಉಳಿಸಿಕೊಳ್ಳಲು ದೇವಸ್ವಂ ಮಂಡಳಿಯು ಹೋರಾಡುತ್ತಿದೆ. ಕಾಂಗ್ರೆಸ್ ಮುಖಂಡ ಮತ್ತು ವಕ್ತಾರ ಅಭಿಷೇಕ್ ಮನು ಸಿಂಘ್ವಿ ಈ ಪ್ರಕರಣದಲ್ಲಿ ಮಂಡಳಿ ಪರ ವಾದ ಮಾಡುತ್ತಿದ್ದಾರೆ. ಇದರಿಂದ ಮಂಡಳಿಯ ವಾದವನ್ನು ಕಾಂಗ್ರೆಸ್ ಬೆಂಬಲಿಸಿದಂತಾಗುತ್ತದೆ. ಪಕ್ಷವು ಮಹಿಳಾ ವಿರೋಧಿ ಎಂಬ ಸಂದೇಶ ರವಾನೆಯಾಗುತ್ತದೆ ಎಂದು ಕಾಂಗ್ರೆಸ್‌ನ ಕೆಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.