
ಶಬರಿಮಲೆ ದೇವಾಲಯ
ತಿರುವನಂತಪುರ: ಕೇರಳದ ಶಬರಿಮಲೆ ಅಯ್ಯಪ್ಪ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣ ಮಾಸುವ ಮುನ್ನವೇ ತುಪ್ಪದ ಪ್ರಸಾದ ಮಾರಾಟದಲ್ಲಿ ಅಕ್ರಮ ನಡೆದಿರುವ ಬಗ್ಗೆ ವರದಿಯಾಗಿದೆ.
ತುಪ್ಪದ ಪ್ರಸಾದ ಮಾರಾಟದಲ್ಲಿ ₹16 ಲಕ್ಷ ಅಕ್ರಮ ನಡೆದಿರುವುದು ತನಿಖೆಯಲ್ಲಿ ದೃಢಪಟ್ಟಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಶಬರಿಮಲೆ ದೇವಾಲಯವನ್ನು ನಿರ್ವಹಿಸುವ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ತಿಳಿಸಿದೆ.
ಆದಾಗ್ಯೂ, ತುಪ್ಪ ಮಾರಾಟಕ್ಕೆ ಸಂಬಂಧಿಸಿದಂತೆ ಯಾವುದೇ ಅಕ್ರಮ ನಡೆದಿರುವ ಬಗ್ಗೆ ನನ್ನ ಗಮನಕ್ಕೆ ಬಂದಿಲ್ಲ ಎಂದು ಟಿಡಿಬಿ ಅಧ್ಯಕ್ಷ ಕೆ. ಜಯಕುಮಾರ್ ಹೇಳಿದ್ದಾರೆ.
ಪ್ರಸ್ತುತ ತೀರ್ಥಯಾತ್ರೆಯ ವೇಳೆ ದೇವಸ್ಥಾನದ ಕೌಂಟರ್‌ಗಳ ಮೂಲಕ ಭಕ್ತರಿಗೆ ತುಪ್ಪದ ಪ್ರಸಾದ ಮಾರಾಟ ಮಾಡಲಾಗುತ್ತಿದೆ. ಪ್ರಸಾದ ಮಾರಾಟದಿಂದ ಬಂದಿರುವ ಹಣ ಮತ್ತು ಮಾರಾಟವಾದ ಒಟ್ಟು ಪ್ಯಾಕೆಟ್‌ಗಳಲ್ಲಿ ವ್ಯತ್ಯಾಸ ಕಂಡುಬಂದಿದೆ ಎಂದೂ ಮೂಲಗಳು ವಿವರಿಸಿವೆ.
ಶಬರಿಮಲೆ ಚಿನ್ನದ ಹಗರಣವು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್‌ಡಿಎಫ್ ಸರ್ಕಾರಕ್ಕೆ ಈಗಾಗಲೇ ಸಾಕಷ್ಟು ಮುಜುಗರವನ್ನುಂಟು ಮಾಡಿದೆ. ಏಕೆಂದರೆ ಈ ಪ್ರಕರಣದಲ್ಲಿ ಸಿಪಿಐ (ಎಂ) ನಾಯಕರನ್ನು ಈಗಾಗಲೇ ಬಂಧಿಸಲಾಗಿದೆ. ಮಾಜಿ ಸಚಿವರು ಸೇರಿದಂತೆ ಎಲ್‌ಡಿಎಫ್ ನಾಯಕರ ಮೇಲೂ ನಿಗಾ ಇಡಲಾಗಿದೆ.
ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಶಬರಿಮಲೆ ಹಗರಣದ ವಿಷಯವನ್ನು ಮುಂದಿಟ್ಟುಕೊಂಡೇ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್) ಲಾಭ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲೂ ಮುಖ್ಯವಾಗಿ ಇದೇ ವಿಚಾರವನ್ನು ಪ್ರಸ್ತಾಪಿಸಲು ಸಜ್ಜಾಗುತ್ತಿದೆ. ಇತ್ತ ಬಿಜೆಪಿ ಕೂಡ ಶಬರಿಮಲೆ ಹಗರಣಗಳ ಬಗ್ಗೆ ಜನರ ಗಮನ ಸೆಳೆಯಲು ಪ್ರಯತ್ನಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.