
ಕೋಯಿಕ್ಕೋಡ್: ಶಬರಿಮಲೆ ದೇವಸ್ಥಾನದ ಚಿನ್ನ ನಾಪತ್ತೆ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಒತ್ತಾಯಿಸಿ ಒಂದು ಕೋಟಿ ಸಹಿ ಸಂಗ್ರಹಿಸುವ ಅಭಿಯಾನವನ್ನು ಹಮ್ಮಿಕೊಳ್ಳುವುದಾಗಿ ಬಿಜೆಪಿ ತಿಳಿಸಿದೆ.
ಶಬರಿಮಲೆಯಲ್ಲಿ ಇತ್ತೀಚೆಗೆ ನಡೆದ ಚಿನ್ನ ಕಳ್ಳತನದ ಹಿಂದೆ ದೊಡ್ಡ ಪಿತೂರಿ ಇದೆ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಟಿ ರಮೇಶ್ ಆರೋಪಿಸಿದರು.
‘ಶಬರಿಮಲೆಗೆ ಹೊರ ದೇಶಗಳಿಂದಲೂ ಭಕ್ತರು ಬರುತ್ತಾರೆ. ದೇವಸ್ಥಾನದ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು, ಕೇಂದ್ರವು ಈ ವಿಷಯದಲ್ಲಿ ಭಾಗಿಯಾಗಬೇಕು. ಹೀಗಾಗಿ ಒಂದು ಕೋಟಿ ಜನರ ಸಹಿ ಸಂಗ್ರಹಿಸಿ ಅದನ್ನು ಮೋದಿಯವರಿಗೆ ಕಳುಹಿಸುತ್ತೇವೆ’ ಎಂದರು.
ಶ್ರೀಕೋವಿಲ್‌ನ (ಗರ್ಭಗುಡಿ) ಬಾಗಿಲಿನ ಚೌಕಟ್ಟುಗಳಲ್ಲಿನ ಚಿನ್ನ ಕಳವು ಪ್ರಕರಣದಲ್ಲಿ ವಿದೇಶಿ ಜಾಲದ ಕೈವಾಡದ ಶಂಕೆ ಇರುವ ಕುರಿತು ಇತ್ತೀಚೆಗೆ ಕೇರಳ ಹೈಕೋರ್ಟ್ ಅವಲೋಕಿಸಿರುವುದು, ಈ ಪ್ರಕರಣವು ಒಬ್ಬ ವ್ಯಕ್ತಿಗೆ ಮಾತ್ರ ಸಂಬಂಧಿಸಿದ್ದಲ್ಲ ಎಂಬುದನ್ನು ತೋರಿಸುತ್ತದೆ ಎಂದರು.
‘ಈ ಪಿತೂರಿಯನ್ನು ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಅಧಿಕಾರಿಗಳಿಗೆ ಮಾತ್ರ ಸೀಮಿತಗೊಳಿಸಲು ಸಾಧ್ಯವಿಲ್ಲ. ಸರ್ಕಾರವೂ ಇದರಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದೆ. ಈ ಮೊದಲೂ ಬಿಜೆಪಿ ಈ ಬಗ್ಗೆ ಮಾತನಾಡಿತ್ತು. ಹೈಕೋರ್ಟ್ ಕೂಡ ಇದೇ ರೀತಿ ಕಳವಳ ವ್ಯಕ್ತಪಡಿಸಿದೆ’ ಎಂದೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.