ADVERTISEMENT

ಶಬರಿಮಲೆಯಲ್ಲಿ ಜನದಟ್ಟಣೆ: 48 ಗಂಟೆಯಲ್ಲಿ 2 ಲಕ್ಷ ಭಕ್ತರ ಭೇಟಿ; ಮಹಿಳೆ ಸಾವು

ಕುಡಿಯುವ ನೀರು, ಆಹಾರ ಸಿಗದೆ ಪರಿತಪಿಸಿದ ಯಾತ್ರಾರ್ಥಿಗಳು

ಪಿಟಿಐ
Published 18 ನವೆಂಬರ್ 2025, 15:32 IST
Last Updated 18 ನವೆಂಬರ್ 2025, 15:32 IST
<div class="paragraphs"><p>ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ದೇವರ ದರ್ಶನಕ್ಕಾಗಿ ಮಂಗಳವಾರ ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರ ದಂಡು </p></div>

ಕೇರಳದ ಶಬರಿಮಲೆ ದೇವಸ್ಥಾನದಲ್ಲಿ ದೇವರ ದರ್ಶನಕ್ಕಾಗಿ ಮಂಗಳವಾರ ಸರದಿ ಸಾಲಿನಲ್ಲಿ ನಿಂತಿದ್ದ ಭಕ್ತರ ದಂಡು

   

–ಪಿಟಿಐ ಚಿತ್ರ

ತಿರುವನಂತಪುರ/ಪತ್ತನಂತಿಟ್ಟ: ‘ಮಂಡಲ– ಮಕರವಿಳಕ್ಕು’ ತೀರ್ಥಯಾತ್ರೆ ಪ್ರಯುಕ್ತ ಶಬರಿಮಲೆ ದೇವಸ್ಥಾನ ತೆರೆದ 48 ಗಂಟೆಗಳಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದು, ಪರಿಸ್ಥಿತಿಯನ್ನು ನಿಭಾಯಿಸಲು ಟಿಡಿಬಿ ಸಿಬ್ಬಂದಿ ಹಾಗೂ ಪೊಲೀಸರು ಹರಸಾಹಸಪಟ್ಟರು.

ADVERTISEMENT

ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ, ಕೋಯಿಕ್ಕೋಡ್‌ ಜಿಲ್ಲೆಯ ಕೊಯಿಲಾಂಡಿ ತಾಲ್ಲೂಕಿನ 58 ವರ್ಷದ ಮಹಿಳೆಯೊಬ್ಬರು ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಯಾತ್ರೆಯ ಮೂರನೇ ದಿನವಾದ ಮಂಗಳವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡಿದ್ದು, ದೇವರ ದರ್ಶನಕ್ಕಾಗಿ ಹತ್ತು ಗಂಟೆಗೂ ಹೆಚ್ಚು ಕಾಲ ಸರತಿ ಸಾಲಿನಲ್ಲಿ ನಿಂತಿದ್ದರು. ದೇವಾಲಯದ ಮುಖ್ಯ ದ್ವಾರಗಳನ್ನು ತಲುಪಲು ಹತ್ತಬೇಕಾದ 18 ಮೆಟ್ಟಿಲುಗಳ ಮುಂಭಾಗದಲ್ಲಿರುವ ಸಣ್ಣ ಪ್ರದೇಶದಲ್ಲಿ ಭಕ್ತರು ಕಿಕ್ಕಿರಿದು ತುಂಬಿದ್ದರು. ಈ ವೇಳೆ, ನೂಕುನುಗ್ಗಲು ಉಂಟಾಗಿದ್ದು, ಮಕ್ಕಳು, ವೃದ್ಧರು ಸೇರಿದಂತೆ ಅನೇಕರಿಗೆ ತೊಂದರೆ ಉಂಟಾಯಿತು. ಕುಡಿಯುವ ನೀರು, ಆಹಾರ ಸಿಗದೆ ಪರಿತಪಿಸಿದರು.

ಶಬರಿಮಲೆಯ ತಪ್ಪಲಿನಲ್ಲಿರುವ ಪಂಬಾದಿಂದ ಸನ್ನಿಧಾನಕ್ಕೆ ಹೋಗುವ ತೀರ್ಥಯಾತ್ರೆಯ ಮಾರ್ಗದಲ್ಲಿ ಭಕ್ತರ ದೊಡ್ಡ ಗುಂಪು ತುಂಬಿತ್ತು. ಬೆಟ್ಟ ಹತ್ತಲು ಗಂಟೆಗಟ್ಟಲೆ ಕಾಯಬೇಕಾಗಿತ್ತು. ಪರಸ್ಪರ ನೂಕುನುಗ್ಗಲು ಉಂಟಾಗುತ್ತಿದ್ದಂತೆ ಪೋಷಕರ ಹೆಗಲ ಮೇಲಿದ್ದ ಚಿಕ್ಕ ಮಕ್ಕಳು ಅಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಸ್ಥಳದಲ್ಲಿದ್ದ ಬ್ಯಾರಿಕೇಡ್‌ಗಳನ್ನು ಅನೇಕ ಭಕ್ತರು ಹತ್ತುತ್ತಿರುವುದು ಕಂಡುಬಂತು. ಆದರೆ, ಅದನ್ನು ತಡೆಯಲು ಪೊಲೀಸರು ವಿಫಲರಾದರು.

ದೇವಾಲಯ ತೆರೆದ ದಿನವಾದ ನ.16ರಂದು 53,278 ಹಾಗೂ 17ರಂದು 98,915 ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದರು. 

‘ಕಳೆದ ವರ್ಷ ನಾಲ್ಕು ದಿನಗಳಲ್ಲಿ ಒಂದು ಲಕ್ಷ ಭಕ್ತರು ಭೇಟಿ ನೀಡಿದ್ದರೆ, ಈ ಬಾರಿ ಎರಡು ದಿನಗಳಲ್ಲೇ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಆಗಮಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ನಾವು ಸ್ಥಳದಲ್ಲೇ ಬುಕ್ಕಿಂಗ್‌ ಅನ್ನು 20 ಸಾವಿರಕ್ಕೆ ಮಿತಿಗೊಳಿಸಿದ್ದರೂ ಹೆಚ್ಚಿನ ಜನರು ಬರುತ್ತಿದ್ದಾರೆ. ಅವರನ್ನು ಹಿಂದೆ ಕಳುಹಿಸಲು ಸಾಧ್ಯವಾಗದ ಕಾರಣ 37 ಸಾವಿರ ಜನರಿಗೆ ಸ್ಥಳದಲ್ಲೇ ಬುಕ್ಕಿಂಗ್‌ ಮೂಲಕ ಅವಕಾಶ ನೀಡಬೇಕಾಯಿತು’ ಎಂದು ಎಡಿಜಿಪಿ ಎಸ್. ಶ್ರೀಜಿತ್ ಸುದ್ದಿಗಾರರಿಗೆ ತಿಳಿಸಿದರು.

‘ವರ್ಚುವಲ್‌–ಕ್ಯೂ ಬುಕ್ಕಿಂಗ್‌ ಮಾಡಿದವರು ನಿಗದಿತ ದಿನದಂದು ಬರುತ್ತಿಲ್ಲ. ಅವರು ಮನಸ್ಸಿಗೆ ಬಂದಾಗ ಬರುತ್ತಾರೆ. ಹಾಗೆ ಮಾಡಬಾರದು. ಜನರು ಶಿಸ್ತುಬದ್ಧವಾಗಿ ಬಂದರೆ ಈ ಸಮಸ್ಯೆಗಳನ್ನು ಪರಿಹರಿಸಬಹುದು. ಅನೇಕರು ಸರತಿ ಸಾಲುಗಳ ಮೂಲಕ ಬರುತ್ತಿಲ್ಲ. ಇದು ಇಂದಿನ ಪರಿಸ್ಥಿತಿಗೆ ಕಾರಣವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ’ ಎಂದರು.

ಶಬರಿಮಲೆ ಪ್ರವೇಶವನ್ನು ದಿನಕ್ಕೆ ಒಂದು ಲಕ್ಷಕ್ಕೆ ಸೀಮಿತಗೊಳಿಸಲಾಗುವುದು. ಸ್ಥಳದಲ್ಲೇ ಬುಕ್ಕಿಂಗ್‌ ಅನ್ನು ದಿನಕ್ಕೆ 20 ಸಾವಿರಕ್ಕೆ ಮಿತಿಗೊಳಿಸಲಾಗುವುದು.
ಕೆ. ಜಯಕುಮಾರ್‌ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ

ಬಸ್‌ ಪಲ್ಟಿ

ಶಬರಿಮಲೆ ಯಾತ್ರೆ ಕೈಗೊಂಡಿದ್ದ ಕರ್ನಾಟಕದ ಮಕ್ಕಳು ಸೇರಿದಂತೆ 33 ಭಕ್ತರಿದ್ದ ಬಸ್‌ ಕೊಟ್ಟಾಯಂ ಜಿಲ್ಲೆಯ ಎರುಮೇಲಿ ಬಳಿ ಪಲ್ಟಿಯಾಗಿದೆ. ಇಳಿಜಾರಿನಲ್ಲಿ ಮತ್ತೊಂದು ವಾಹನವನ್ನು ಹಿಂದಿಕ್ಕುವಾಗ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಚಿಕಿತ್ಸೆ ಪಡೆದ ಬಳಿಕ ಆಸ್ಪತ್ರೆಯಿಂದ ತೆರಳಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

‘200 ಹೆಚ್ಚುವರಿ ಸಿಬ್ಬಂದಿ ನಿಯೋಜನೆ’

‘ಸರತಿ ಸಾಲಿನಲ್ಲಿ ನಿಂತಿರುವ ಭಕ್ತರ ಬಳಿ ತೆರಳಿ ಕುಡಿಯುವ ನೀರು ಒದಗಿಸಲು 200 ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ದರ್ಶನಕ್ಕಾಗಿ ಭಕ್ತರು 18 ಮೆಟ್ಟಿಲುಗಳನ್ನು ಸುಗಮವಾಗಿ ಹತ್ತಲು ಸಾಧ್ಯವಾಗುವಂತೆ ಮತ್ತು ಯಾರೂ ಸರದಿ ಸಾಲನ್ನು ಭೇದಿಸದಂತೆ ನೋಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧ್ಯಕ್ಷ ಕೆ. ಜಯಕುಮಾರ್‌ ಹೇಳಿದರು. ‘ಸನ್ನಿಧಾನಕ್ಕೆ ಹೋಗುವ ಮಾರ್ಗದ ಅಲ್ಲಲ್ಲಿ ಭಕ್ತರು ವಿಶ್ರಾಂತಿ ಪಡೆಯಲು ವ್ಯವಸ್ಥೆ ಮಾಡಲಾಗಿದ್ದು ನೀರು ಮತ್ತು ಬಿಸ್ಕತ್ತು ಒದಗಿಸಲಾಗುತ್ತದೆ. ಆದರೆ ವಿರಮಿಸುತ್ತಾ ಕೂತರೆ ಬೇಗ ದರ್ಶನ ಭಾಗ್ಯ ಸಿಗದೇ ಹೋಗಬಹುದು ಎಂಬ ಕಾರಣಕ್ಕೆ ವಿಶ್ರಾಂತಿ ತಾಣಕ್ಕೆ ಭೇಟಿ ನೀಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು. ‘ಶಬರಿಮಲೆಯಲ್ಲಿ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ತಮಿಳುನಾಡಿನಿಂದ ಸುಮಾರು 200 ಮಂದಿ ಸ್ವಚ್ಛತಾ ಸಿಬ್ಬಂದಿಯನ್ನು ಕರೆತರಲಾಗುತ್ತಿದೆ’ ಎಂದು ಹೇಳಿದರು. ‘ದೇವಾಲಯದ ಆವರಣದಲ್ಲಿ ಇಷ್ಟು ದೊಡ್ಡ ಮತ್ತು ಅಪಾಯಕಾರಿ ಜನಸಂದಣಿಯನ್ನು ನಾನು ಈವರೆಗೆ ನೋಡಿಯೇ ಇಲ್ಲ. ಕೆಲವರು ಮುಂದೆ ಸಾಗಲು ಪ್ರಯತ್ನಿಸುತ್ತಿದ್ದಾರೆ. ಇಲ್ಲಿರುವ ದೊಡ್ಡ ಜನಸಂದಣಿಯನ್ನು ನೋಡಿ ನನಗೂ ಭಯವಾಗಿದೆ. ಇಷ್ಟೊಂದು ದೊಡ್ಡ ಜನಸಂದಣಿ ಇಲ್ಲಿ ಸೇರಬಾರದಿತ್ತು’ ಎಂದರು. ‘ಶಬರಿಮಲೆ ದೇವಸ್ಥಾನದ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅನೇಕ ಪೊಲೀಸರು ಮತ್ತು ಇತರ ನೌಕರರು ಇನ್ನೂ ಕೆಲಸಕ್ಕೆ ಹಾಜರಾಗಿಲ್ಲ’ ಎಂದು ಹೇಳಿದರು. ನೀಲಕ್ಕಲ್‌ನಲ್ಲೇ ಭಕ್ತರಿಗೆ ತಡೆ ಪಂಬಾದಲ್ಲಿ ಜನಸಂದಣಿಯನ್ನು ನಿಯಂತ್ರಿಸುವ ಉದ್ದೇಶದಿಂದ ನೀಲಕ್ಕಲ್‌ನಲ್ಲೇ ಭಕ್ತರನ್ನು ತಡೆಹಿಡಿಯಲಾಯಿತು. ‘ನೀಲಕ್ಕಲ್‌ನಲ್ಲಿ ಭಕ್ತರಿಗೆ ಬೇಕಾದ ಸೌಲಭ್ಯಗಳಿವೆ. ಅಲ್ಲಿ ಸ್ವಲ್ಪ ಹೊತ್ತು ವಿಶ್ರಾಂತಿ ಪಡೆಯಬೇಕು. ಬಳಿಕ ಸನ್ನಿಧಾನಕ್ಕೆ ತೆರಳಲು ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲಿ ಏಳು ಹೆಚ್ಚುವರಿ ಬುಕ್ಕಿಂಗ್‌ ಕೌಂಟರ್‌ಗಳನ್ನು ಸ್ಥಾಪಿಸಲಾಗುವುದು’ ಎಂದು ಕೆ. ಜಯಕುಮಾರ್‌ ತಿಳಿಸಿದರು.

ಭಕ್ತಾದಿಗಳಿಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ: ಆರೋಪ

‘ಭಕ್ತರ ಸುಗಮ ಯಾತ್ರೆಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ’ ಎಂದು ವಿರೋಧ ಪಕ್ಷಗಳಾದ ಕಾಂಗ್ರೆಸ್‌ ಮತ್ತು ಬಿಜೆಪಿ ಆರೋಪಿಸಿವೆ. ‘ಭಕ್ತರಿಗೆ ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಹಾಗೂ ಸಾಕಷ್ಟು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲು ಸರ್ಕಾರ ಹಾಗೂ ಟಿಡಿಬಿ ವಿಫಲವಾಗಿವೆ’ ಎಂದು ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್‌ ಆರೋಪಿಸಿದ್ದಾರೆ. ‘ಸ್ಥಳೀಯ ಸಂಸ್ಥೆಗಳ ಚುನಾವಣೆ ಘೋಷಣೆಯಾದ ನಂತರ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿರುವುದರಿಂದ ಸರಿಯಾದ ವ್ಯವಸ್ಥೆ ಮಾಡಲು ಸಾಧ್ಯವಾಗುತ್ತಿಲ್ಲ ಎಂಬ ಸರ್ಕಾರದ ಹೇಳಿಕೆಯು ಹಾಸ್ಯಾಸ್ಪದವಾಗಿದೆ. ಅಗತ್ಯ ಸಿದ್ಧತೆಗಳನ್ನು ಮುಂಚಿತವಾಗಿಯೇ ಮಾಡಬೇಕಾಗಿತ್ತು’ ಎಂದು ಹೇಳಿದ್ದಾರೆ. ‘ರಾಜಕೀಯ ಉದ್ದೇಶಗಳಿಗಾಗಿ ಜಾಗತಿಕ ಅಯ್ಯಪ್ಪ ಸಂಗಮ ಕಾರ್ಯಕ್ರಮವನ್ನು ಆಯೋಜಿಸಿದ್ದವರು ಈ ವರ್ಷದ ಭಕ್ತರ ತೀರ್ಥಯಾತ್ರೆಯನ್ನು ಹಾಳು ಮಾಡಿದ್ದಾರೆ. ಈ ವಿಷಯದಲ್ಲಿ ಕೇರಳ ಹೈಕೋರ್ಟ್‌ ಮಧ್ಯಪ್ರವೇಶ ಮಾಡಬೇಕು ಎಂದು ಅವರು ಕೋರಿದರು. ರಾಜ್ಯ ಸರ್ಕಾರ ಮತ್ತು ಟಿಡಿಬಿ ವಿರುದ್ಧ ಮಾಜಿ ಕೇಂದ್ರ ರಾಜ್ಯ ಸಚಿವ ವಿ. ಮುರಳೀಧರನ್‌ ಅವರು ಇದೇ ರೀತಿಯ ಆರೋಪಗಳನ್ನು ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.