ಶಬರಿಮಲೆ
– ಪಿಟಿಐ ಚಿತ್ರ
ತಿರುವನಂತಪುರ: ಶಬರಿಮಲೆ ದೇವಸ್ಥಾನದ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ತಾಮ್ರದ ಕವಚದಲ್ಲಿನ ಚಿನ್ನದ ತೂಕ ಕಡಿಮೆಯಾದ ಪ್ರಕರಣವು ಹೊಸ ತಿರುವು ಪಡೆದುಕೊಳ್ಳುತ್ತಿದೆ. ಈ ಪ್ರಕರಣದ ತನಿಖೆಯು ಬೆಂಗಳೂರಿನಲ್ಲಿ ನೆಲಸಿರುವ ಮಲಯಾಳಿ ಉನ್ನಿಕೃಷ್ಣನ್ ಪೊಟ್ಟಿ ಎಂಬವರ ಮೇಲೆ ಅನುಮಾನ ಮೂಡುವಂತೆ ಮಾಡಿದೆ.
ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ವಿಚಕ್ಷಣ ವಿಭಾಗವು ಈ ಪ್ರಕರಣದ ತನಿಖೆ ನಡೆಸುತ್ತಿದೆ. ದ್ವಾರಪಾಲಕ ಮೂರ್ತಿಗಳ ಕವಚಗಳಿಗೆ ಚಿನ್ನದ ಲೇಪನ ಕೊಡುಗೆಯಾಗಿ ನೀಡಿರುವ ಉನ್ನಿಕೃಷ್ಣನ್ ಪೊಟ್ಟಿ ಅವರು ಚಿನ್ನದ ಲೇಪನದ ಹೆಸರಿನಲ್ಲಿ ವಿವಿಧ ರಾಜ್ಯಗಳಲ್ಲಿ ಭಾರಿ ಹಣ ಸಂಗ್ರಹದಲ್ಲಿ ತೊಡಗಿದ್ದಾರೆ ಎಂದು ತನಿಖಾ ತಂಡ ಶಂಕಿಸಿದೆ.
ಬೆಂಗಳೂರು ಮೂಲದ ಇಬ್ಬರು ಉದ್ಯಮಿಗಳು ಪೊಟ್ಟಿ ಅವರೊಂದಿಗೆ ಶಾಮೀಲಾಗಿದ್ದಾರೆ ಎನ್ನಲಾಗಿದೆ. ನಿಧಿ ಸಂಗ್ರಹದ ಭಾಗವಾಗಿ 2019ರಲ್ಲಿ ಬೆಂಗಳೂರಿನ ಶ್ರೀರಾಂಪುರದಲ್ಲಿರುವ ಶ್ರೀ ಅಯ್ಯಪ್ಪನ್ ದೇವಸ್ಥಾನದಲ್ಲಿ ಶಬರಿಮಲೆಯ ದ್ವಾರಪಾಲಕ ಮೂರ್ತಿಗಳ ಚಿನ್ನ ಲೇಪಿತ ಕವಚಗಳ ಭಾಗಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು ಎಂದು ಹೇಳಲಾಗಿದೆ.
ಈಗ ತಿರುವನಂತಪುರದಲ್ಲಿರುವ ಪೊಟ್ಟಿ ಅವರು ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ನ್ಯಾಯಾಲಯ ಮತ್ತು ಟಿಡಿಬಿ ವಿಚಕ್ಷಣ ದಳವು ಕೋರಿರುವ ಎಲ್ಲಾ ದಾಖಲೆಗಳನ್ನು ಹಾಜರುಪಡಿಸುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ತಿರುವನಂತಪುರದ ಪುಳಿಮಾತ್ತ್ ಮೂಲದ ಪೊಟ್ಟಿ ಅವರು ಬೆಂಗಳೂರಿನ ಶ್ರೀರಾಂಪುರ ದೇವಾಲಯದಲ್ಲಿ ಸಹಾಯಕ ಅರ್ಚಕರಾಗಿ ಕೆಲಸ ಮಾಡಿದ್ದರು. 2004ರಲ್ಲಿ ಅವರನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಸುಮಾರು 10 ವರ್ಷಗಳ ಹಿಂದೆ ಶಬರಿಮಲೆಯ ಕಿರಿಯ ಅರ್ಚಕರೊಬ್ಬರಿಗೆ ಸಹಾಯಕರಾಗಿ ಕೆಲಸ ಮಾಡಿದ್ದರು.
ಅಂದಿನಿಂದ ಅವರು ಶಬರಿಮಲೆ ದೇವಸ್ಥಾನಕ್ಕೆ ದೊಡ್ಡ ಮೊತ್ತದ ದೇಣಿಗೆಗಳನ್ನು ನೀಡುವ ಹಲವು ಪ್ರಮುಖ ಉದ್ಯಮಿಗಳಿಗೆ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ. ಪೊಟ್ಟಿ, ತಿರುವನಂತಪುರದಲ್ಲಿ ಎರಡು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯೂ ಆಗಿದ್ದಾರೆ.
ಶಬರಿಮಲೆ ದೇವಸ್ಥಾನಕ್ಕೆ ದೇಣಿಗೆ ನೀಡುವ ಹೆಸರಿನಲ್ಲಿ ದಕ್ಷಿಣ ಭಾರತದ ರಾಜ್ಯಗಳ ಉದ್ಯಮಿಗಳಿಂದ ಅವರು ಈಗ ಹಣ ಸಂಗ್ರಹಿಸುತ್ತಿದ್ದಾರೆ ಎಂದು ಟಿಡಿಬಿ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.