
ತಿರುವನಂತಪುರ: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಚಿನ್ನ ನಾಪತ್ತೆಯಾಗಿರುವ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ದೇವಸ್ಥಾನದ ಪ್ರಧಾನ ಅರ್ಚಕ ಕಂಡರಾರು ರಾಜೀವಾರು ಅವರನ್ನು ಶುಕ್ರವಾರ ಇಲ್ಲಿ ಬಂಧಿಸಿದೆ ಎಂದು ಮೂಲಗಳು ತಿಳಿಸಿವೆ.
ಈ ಮೂಲಕ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ದೇವಸ್ಥಾನದ ಸಂಪೂರ್ಣ ಧಾರ್ಮಿಕ ಅಧಿಕಾರ ಹೊಂದಿದ್ದ ರಾಜೀವಾರು ಅವರನ್ನು ಗೋಪ್ಯ ಸ್ಥಳದಲ್ಲಿ ವಿಚಾರಣೆ ನಡೆಸಲಾಯಿತು. ಬಳಿಕ ಎಸ್‌ಐಟಿ ಕಚೇರಿಗೆ ಕರೆದೊಯ್ದು, ಬಂಧಿಸಲಾಯಿತು ಎಂದು ಹೇಳಿವೆ.
ಪ್ರಕರಣದ ಪ್ರಮುಖ ಆರೋಪಿ, ಬೆಂಗಳೂರಿನ ಉದ್ಯಮಿ ಉಣ್ಣಿಕೃಷ್ಣನ್ ಪೋಟಿ ಮತ್ತು ತಿರುವಾಂಕೂರು ದೇವಸ್ವ ಮಂಡಳಿಯ ಮಾಜಿ ಅಧ್ಯಕ್ಷ ಎ. ಪದ್ಮಕುಮಾರ್ ನೀಡಿದ ಹೇಳಿಕೆಗೆಳ ಆಧಾರದ ಮೇಲೆ ರಾಜೀವಾರು ಅವರನ್ನು ಬಂಧಿಸಲಾಗಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜೀವಾರು ಹಾಗೂ ಉಣ್ಣಿಕೃಷ್ಣನ್ ಸಂಪರ್ಕದಲ್ಲಿದ್ದರು. ದೇವಾಲಯದ ಶ್ರೀಕೋವಿಲ್‌ನ (ಗರ್ಭಗುಡಿ) ಬಾಗಿಲಿನ ಚಿನ್ನ ಲೇಪಿತ ಚೌಕಟ್ಟು ಹಾಗೂ ದ್ವಾರಪಾಲಕರ ಚಿನ್ನ ಲೇಪಿತ ಪ್ರತಿಮೆಗಳನ್ನು ಸ್ಮಾರ್ಟ್ ಕ್ರಿಯೇಷನ್ಸ್‌ನಲ್ಲಿ ಎಲೆಕ್ಟ್ರೋಪ್ಲೇಟಿಂಗ್ ಮಾಡುವಂತೆ ರಾಜೀವಾರು ಉಣ್ಣಿಕೃಷ್ಣನ್ ಅವರಿಗೆ ಹೇಳಿದ್ದರು ಎಂಬುದು ತನಿಖೆ ವೇಳೆಗೆ ತಿಳಿದುಬಂದಿದೆ.
ತನಿಖೆಯ ಭಾಗವಾಗಿ ಈ ಹಿಂದೆ ರಾಜೀವಾರು ಅವರನ್ನು ಒಮ್ಮೆ ಎಸ್ಐಟಿ ವಿಚಾರಣೆಗೊಳಪಡಿಸಿತ್ತು. ಪ್ರಕರಣದ ತನಿಖೆ ನಡೆಸಲು ಕೇರಳ ಹೈಕೋರ್ಟ್ ಎಸ್‌ಐಟಿಯನ್ನು ರಚಿಸಿದೆ.
ಪ್ರಕರಣ ದಾಖಲಿಸಿದ ಇ.ಡಿ: ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಚಿನ್ನ ನಾಪತ್ತೆಯಾಗಿರುವ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ ಎಂದು ಮೂಲಗಳು ತಿಳಿಸಿವೆ.
ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ, ಪೊಲೀಸ್ ಎಫ್‌ಐಆರ್‌ಗೆ ಸಮವಾದ ಪ್ರಕರಣವನ್ನು ಶುಕ್ರವಾರ ದಾಖಲಿಸಲಾಗಿದೆ ಎಂದು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.