
ಶಬರಿಮಲೆ
ತಿರುವನಂತಪುರಂ: ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣದ ಪ್ರಮುಖ ಆರೋಪಿಗಳಿಂದ ಈವರೆಗೆ ವಶಪಡಿಸಿಕೊಂಡಿರುವ ಚಿನ್ನಕ್ಕಿಂತಲೂ ಹೆಚ್ಚಿನ ಪ್ರಮಾಣದ ಚಿನ್ನ ದೇವಾಲಯದಿಂದ ನಾಪತ್ತೆಯಾಗಿದೆ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡವು (ಎಸ್‌ಐಟಿ) ಶಂಕೆ ವ್ಯಕ್ತಪಡಿಸಿದೆ.
ಆರೋಪಿಗಳಾದ ಉಣ್ಣಿಕೃಷ್ಣನ್ ಪೋಟಿ, ಸ್ಮಾರ್ಟ್ ಕ್ರಿಯೇಷನ್ಸ್ ಸಿಇಒ ಪಂಕಜ್ ಭಂಡಾರಿ ಹಾಗೂ ಆಭರಣ ವ್ಯಾಪಾರಿ ಗೋವರ್ಧನ್ ರೊದ್ದಂ ಅವರನ್ನು ತನಿಖಾ ತಂಡದ ವಶಕ್ಕೆ ನೀಡಬೇಕೆಂದು ಕೋರಿ ಕೊಲ್ಲಂ ವಿಚಕ್ಷಣಾ ನ್ಯಾಯಾಲಯಕ್ಕೆ ಎಸ್‌ಐಟಿ ಅರ್ಜಿ ಸಲ್ಲಿಸಿದೆ. ಈ ವೇಳೆ ಪ್ರಕರಣದ ವಿವರಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಿ, ಈ ಸಂಶಯ ವ್ಯಕ್ತಪಡಿಸಿದೆ.
2019ರಲ್ಲಿ ದ್ವಾರಪಾಲಕ ಮೂರ್ತಿಗಳ ಕವಚಗಳು ಹಾಗೂ ಗರ್ಭಗುಡಿಯ 7 ಚಿನ್ನ ಲೇಪಿತ ತಾಮ್ರದ ಕವಚವನ್ನು ಸ್ಮಾರ್ಟ್ ಕ್ರಿಯೇಷನ್ಸ್‌ನಲ್ಲಿ ಎಲೆಕ್ಟ್ರೋಪ್ಲೇಟಿಂಗ್ ಮಾಡಿಸಲು ಉಣ್ಣಿಕೃಷ್ಣನ್ ಅವರಿಗೆ ನೀಡಲಾಗಿತ್ತು. ಈ ಪ್ರಕ್ರಿಯೆ ಮುಗಿದ ನಂತರ ಆರೋಪಿಗಳು ಉಳಿದ ಚಿನ್ನವನ್ನು ಕಳವು ಮಾಡಿದ್ದಾರೆ ಎಂದು ಎಸ್ಐಟಿ ಉಲ್ಲೇಖಿಸಿದೆ.
ಕವಚದ ಒಟ್ಟು ತೂಕ 42.100 ಕೆಜಿ ಆಗಿತ್ತು. ಚಿನ್ನ ಲೇಪನದ ವೇಳೆ 109.243 ಗ್ರಾಂ ಚಿನ್ನವನ್ನು ತೆಗೆದುಕೊಂಡಿರುವುದಾಗಿ ಭಂಡಾರಿ ಒಪ್ಪಿಕೊಂಡಿದ್ದಾರೆ. ಅಲ್ಲದೇ, ಲೇಪನಕ್ಕೆ ಶುಲ್ಕವಾಗಿ ಈ ಚಿನ್ನವನ್ನು ಪಡೆದಿರುವುದಾಗಿಯೂ ಹೇಳಿದ್ದಾರೆ. ಇನ್ನು ಲೇಪನದ ವೇಳೆ ಕವಚದಿಂದ ತೆಗೆದಿರುವ ಚಿನ್ನವನ್ನು ಗೋವರ್ಧನ್ ಅವರಿಗೆ ನೀಡಲಾಗಿದ್ದು, 2025ರ ಅಕ್ಟೋಬರ್ 24ರಂದು 474.960 ಗ್ರಾಂ ಚಿನ್ನವನ್ನು ಗೋವರ್ಧನ್ ಎಸ್‌ಐಟಿಗೆ ಒಪ್ಪಿಸಿದ್ದಾರೆ.
ಆದರೆ, ತನಿಖೆ ವೇಳೆ ಆರೋಪಿಗಳಿಂದ ವಶಪಡಿಸಿಕೊಂಡಿರುವ ಈ ಚಿನ್ನದ ಪ್ರಮಾಣಕ್ಕಿಂತಲೂ ಹೆಚ್ಚಿನ ಚಿನ್ನ ಕವಚಗಳಿಂದ ಕಾಣೆಯಾಗಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ವೈಜ್ಞಾನಿಕ ವಿಶ್ಲೇಷಣೆಗೆ ತಾಮ್ರದ ಕವಚಗಳ ಮೇಲೆ ಲೇಪಿಸಿರುವ ಚಿನ್ನದ ಲೇಪನದ ಮಾದರಿಯನ್ನು ತಿರುವನಂತಪುರದ ವಿಕ್ರಂ ಸಾರಾಭಾಯಿ ಬಾಹ್ಯಾಕಾಶ ಕೇಂದ್ರಕ್ಕೆ (ವಿಎಸ್‌ಎಸ್‌ಸಿ) ಕಳುಹಿಸಲಾಗಿದ್ದು, ವರದಿ ಬರುವುದು ಬಾಕಿ ಇದೆ ಎಂದೂ ಅರ್ಜಿಯಲ್ಲಿ ಎಸ್ಐಟಿತಿಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 10 ಮಂದಿಯನ್ನು ಎಸ್‌ಐಟಿ ಬಂಧಿಸಿದೆ. ಈ ಪೈಕಿ ತಿರುವಾಂಕೂರು ದೇವಸ್ವಂ ಮಂಡಳಿಯ ಇಬ್ಬರು ಮಾಜಿ ಅಧ್ಯಕ್ಷರೂ ಸೇರಿದ್ದಾರೆ. ತನಿಖೆ ಪೂರ್ಣಗೊಳಿಸಲು ಹೈಕೋರ್ಟ್ ಈ ತಿಂಗಳಾಂತ್ಯದವರೆಗೆ ಎಸ್‌ಐಟಿಗೆ ಗಡುವು ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.