
ಶಬರಿಮಲೆ: ಇಲ್ಲಿನ ಅಯ್ಯಪ್ಪ ದೇವಾಲಯದಲ್ಲಿ ಶನಿವಾರ ನಡೆದ ಮಂಡಲ ಪೂಜೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು. ಈ ಮೂಲಕ 41 ದಿನಗಳಿಂದ ನಡೆದ ವಾರ್ಷಿಕ ತೀರ್ಥಯಾತ್ರೆ ಸಂಪನ್ನಗೊಂಡಿತು.
ಶುಕ್ರವಾರ ಸಂಜೆ ದೇವಾಲಯದ ಸಂಕೀರ್ಣಕ್ಕೆ ಮೆರವಣಿಗೆಯಲ್ಲಿ ತರಲಾದ ಸ್ವರ್ಣವಸ್ತ್ರವನ್ನು ಅಯ್ಯಪ್ಪ ದೇವರ ವಿಗ್ರಹಕ್ಕೆ ಅಲಂಕಾರ ಮಾಡಿ, ಮಂಡಲ ಪೂಜೆ ನೆರವೇರಿಸಲಾಯಿತು. ದೇವಾಲಯದ ತಂತ್ರಿ (ಮುಖ್ಯ ಅರ್ಚಕ) ಕಂಡರಾರು ಮಹೇಶ್ ಮೋಹನಾರು ಅವರ ನೇತೃತ್ವದಲ್ಲಿ ಶನಿವಾರ ಬೆಳಿಗ್ಗೆ 10.10ರಿಂದ 11.30ರವರೆಗೆ ವಿಧಿವಿಧಾನಗಳನ್ನು ನೆರವೇರಿಸಲಾಯಿತು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಹಾಗೂ ಹೊರರಾಜ್ಯಗಳಿಂದ ಬಂದಿದ್ದ ಸಾವಿರಾರು ಭಕ್ತರು ಹಾಗೂ ಮಾಲೆ ಧರಿಸಿದವರು ‘ಇರುಮುಡಿ’ ಹೊತ್ತು ದೇವರ ದರ್ಶನಕ್ಕಾಗಿ ಗಂಟೆಗಟ್ಟಲೆ ಸರದಿಯಲ್ಲಿ ನಿಂತಿದ್ದರು.
ರಾತ್ರಿ 10 ಗಂಟೆಗೆ ‘ಹರಿವರಾಸನಂ’ ಪಠಣದ ನಂತರ ಮಂಡಲ ಪೂಜೆ ನೆರವೇರಿಸಲಾಯಿತು. ಬಳಿಕ ದೇವಾಲಯದ ಬಾಗಿಲು ಮುಚ್ಚಲಾಯಿತು. ಮಕರವಿಳಕ್ಕು ಹಬ್ಬಕ್ಕಾಗಿ ಡಿಸೆಂಬರ್ 30ರಂದು ಸಂಜೆ 5 ಗಂಟೆಗೆ ದೇವಾಲಯ ಮತ್ತೆ ತೆರೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.