
ಪತ್ತನಂತಿಟ್ಟ: ವಾರ್ಷಿಕ ಮಂಡಲಂ– ಮಕರವಿಳಕ್ಕು ತೀರ್ಥಯಾತ್ರೆಯ ಋತುವಿನ ಪೂರ್ವಭಾವಿಯಾಗಿ ಶಬರಿಮಲೆಯ ಅಯ್ಯಪ್ಪ ದೇವಾಲಯವನ್ನು ಭಾನುವಾರ ಸಂಜೆ ತೆರೆಯಲಾಯಿತು.
ಎರಡು ತಿಂಗಳಿಗೂ ಹೆಚ್ಚು ಕಾಲ ನಡೆಯುವ ತೀರ್ಥಯಾತ್ರೆಯು ವೃಶ್ಚಿಕದ ಮಲಯಾಳಂ ಮಾಸದ ಮೊದಲ ದಿನವಾದ ಸೋಮವಾರದಂದು ಪ್ರಾರಂಭವಾಗುತ್ತದೆ.
ದೇಗುಲವನ್ನು ತೆರೆದಾಕ್ಷಣ ಪೂಜೆ ಸಲ್ಲಿಸಲು ನೂರಾರು ಭಕ್ತರು ಧಾವಿಸಿದ್ದರಿಂದ ಸನ್ನಿಧಾನ (ದೇವಾಲಯ ಸಂಕೀರ್ಣ), ಚಾರಣ ಮಾರ್ಗಗಳು ಮತ್ತು ಮೂಲ ಶಿಬಿರಗಳಲ್ಲಿ ಭಾನುವಾರ ಭಾರೀ ಜನದಟ್ಟಣೆ ಕಂಡುಬಂತು.
ತಂತ್ರಿ (ಪ್ರಧಾನ ಅರ್ಚಕ) ಮಹೇಶ್ ಮೋಹನರು, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅಧಿಕಾರಿಗಳು ಮತ್ತು ಭಕ್ತರ ಸಮ್ಮುಖದಲ್ಲಿ ಮುಖ್ಯ ಅರ್ಚಕ ಅರುಣ್ ಕುಮಾರ್ ನಂಬೂದರಿ ಅವರು ಗರ್ಭಗುಡಿಯನ್ನು ತೆರೆದಾಗ ದೇವಾಲಯದ ಆವರಣವು ಅಯ್ಯಪ್ಪನ ಮಂತ್ರಗಳಿಂದ ಪ್ರತಿಧ್ವನಿಸಿತು.
ಶಬರಿಮಲೆ ಮತ್ತು ಮಲಿಕಪ್ಪುರಂ ದೇವಾಲಯಗಳಿಗೆ ಹೊಸದಾಗಿ ನೇಮಕಗೊಂಡ ಮುಖ್ಯ ಅರ್ಚಕರಾದ ಇ.ಡಿ. ಪ್ರಸಾದ್ ಮತ್ತು ಎಂ.ಜಿ. ಮನು ಅವರ ಪ್ರತಿಷ್ಠಾಪನಾ ಸಮಾರಂಭವೂ ಇದೇ ವೇಳೆ ನಡೆಯಿತು.
ಜನದಟ್ಟಣೆಯನ್ನು ನಿಯಂತ್ರಿಸುವ ಉದ್ದೇಶದಿಂದ ಅಧಿಕಾರಿಗಳು ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ದೈನಂದಿನ ಯಾತ್ರಾರ್ಥಿಗಳ ಸಂಖ್ಯೆಯನ್ನು 90 ಸಾವಿರದಿಂದ 70 ಸಾವಿರಕ್ಕೆ ಮತ್ತು ಸ್ಥಳದಲ್ಲೇ ಬುಕ್ಕಿಂಗ್ ಮೂಲಕ 20 ಸಾವಿರಕ್ಕೆ ಸೀಮಿತಗೊಳಿಸಿದ್ದಾರೆ.
ದೇವಾಲಯವು ಬೆಳಗಿನ ಜಾವ 3 ಗಂಟೆಯಿಂದ ರಾತ್ರಿ 11ರವರೆಗೆ ತೆರೆದಿರುತ್ತದೆ. ಇದು ಅಯ್ಯಪ್ಪ ದೇವರ ಸಾಂಪ್ರದಾಯಿಕ ಹಾಡು ‘ಹರಿವರಾಸನಂ’ ಪಠಣದೊಂದಿಗೆ ಕೊನೆಗೊಳ್ಳುತ್ತದೆ.
‘ಭಕ್ತರನ್ನು ಸ್ವಾಗತಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಪಾದಯಾತ್ರೆ ಮೂಲಕ ದೇವಾಲಯ ತಲುಪುವ ಯಾತ್ರಾರ್ಥಿಗಳಿಗೆ ಕುಡಿಯುವ ನೀರು, ಒಣ ಶುಂಠಿ ನೀರು ಮತ್ತು ಬಿಸಿನೀರನ್ನು ವಿತರಿಸುವ ಕೇಂದ್ರಗಳು ಹಾಗೂ ವಿಶ್ರಾಂತಿಗೆ ಬೆಂಚು ಸೌಲಭ್ಯ ಕಲ್ಪಿಸಲಾಗಿದೆ’ ಎಂದು ಟಿಡಿಬಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.