ADVERTISEMENT

ಖಾಕಿ ಸರ್ಪಗಾವಲಿನಲ್ಲಿ ತೆರೆಯಲಿದೆ ಅಯ್ಯಪ್ಪನ ಸನ್ನಿಧಿ ಬಾಗಿಲು

ಬಿಗಿ ಬಂದೋಬಸ್ತ್‌, ನಿಷೇಧಾಜ್ಞೆ ಜಾರಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2018, 1:31 IST
Last Updated 5 ನವೆಂಬರ್ 2018, 1:31 IST
ಶಬರಿಮಲೆ
ಶಬರಿಮಲೆ   

ತಿರುವನಂತಪುರ:ಕೇರಳದ ಪ್ರಸಿದ್ಧ ತೀರ್ಥಕ್ಷೇತ್ರ ಶಬರಿಮಲೆ ಮತ್ತು ಸುತ್ತಲಿನ ಪ್ರದೇಶವನ್ನು ಅಕ್ಷರಶಃ ಪೊಲೀಸ್‌ ಭದ್ರಕೋಟೆಯಾಗಿ ಭಾನುವಾರ ಪರಿವರ್ತಿಸಲಾಗಿದೆ. ಸೋಮವಾರ ಸಂಜೆ ಐದು ಗಂಟೆಗೆ ಅಯ್ಯಪ್ಪ ಸ್ವಾಮಿ ದೇಗುಲದ ಬಾಗಿಲು ತೆರೆಯಲಿದೆ.

ಎಲ್ಲ ವಯಸ್ಸಿನ ಮಹಿಳೆಯರಿಗೆ ದೇಗುಲಕ್ಕೆ ಪ್ರವೇಶ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ ಸೆ. 28ರಂದು ತೀರ್ಪು ನೀಡಿತ್ತು. ಮಹಿಳೆಯರ ಪ್ರವೇಶ ತಡೆಯಲು ಭಕ್ತರ ಕೆಲವು ಗುಂಪುಗಳು ಪ್ರಯತ್ನಿಸುತ್ತಿವೆ. ಹಾಗಾಗಿ ದೇಗುಲ ಪರಿಸರದಲ್ಲಿ ಸರ್ಪಗಾವಲು ಏರ್ಪಡಿಸಲಾಗಿದೆ.

ಭದ್ರತೆಗೆ 2,300 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ. ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ದಕ್ಷಿಣ ವಲಯ) ಅನಿಲ್‌ ಕಾಂತ್‌ ಭದ್ರತೆಯ ನೇತೃತ್ವ ವಹಿಸಿದ್ದಾರೆ. 10 ಎಸ್‌ಪಿಗಳು, 10 ಡಿವೈಎಸ್‌ಪಿಗಳು ಹಾಗೂ 20 ಮಂದಿಯ ಕಮಾಂಡೊ ಪಡೆಯನ್ನು ಭದ್ರತೆಗೆ ನಿಯೋಜಿಸಲಾಗಿದೆ. 144ನೇ ಕಲಂ ಅನ್ವಯ ಮಂಗಳವಾರ ರಾತ್ರಿವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.

ADVERTISEMENT

ಕೋರ್ಟ್‌ ತೀರ್ಪು ನೀಡಿದ ನಂತರ, ತಿಂಗಳ ಪೂಜೆಗಾಗಿ ಮೊದಲ ಬಾರಿಗೆ ದೇವಸ್ಥಾನದ ಬಾಗಿಲನ್ನು ಅಕ್ಟೋಬರ್‌ 17ರಿಂದ 22ರ ವರೆಗೆ ತೆರೆಯಲಾಗಿತ್ತು. ಆಗ ಇಲ್ಲಿ ವ್ಯಾಪಕ ಪ್ರತಿಭಟನೆ ನಡೆದಿತ್ತು. ದೇವಾಲಯ ಪ್ರವೇಶಿಸಲು ಪ್ರಯತ್ನಿಸಿದ್ದ 15 ಮಹಿಳೆಯರನ್ನು ಪ್ರತಿಭಟನಕಾರರು ತಡೆದಿದ್ದರು. ಆದ್ದರಿಂದ ಈ ಬಾರಿ ಬಂದೋಬಸ್ತ್‌ ಬಿಗಿ ಮಾಡಲಾಗಿದೆ.

ಭದ್ರತೆ ಹೆಸರಿನಲ್ಲಿ ಯಾತ್ರಿಕರನ್ನು ನಿರ್ಬಂಧಿಸಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ಇದೊಂದು ದುರದೃಷ್ಟಕರ ಪರಿಸ್ಥಿತಿ ಎಂದು ದೇವಸ್ಥಾನದ ಮಾಜಿ ಉಸ್ತುವಾರಿಗಳು,ಪಂದಳಂ ರಾಜವಂಶಸ್ಥರು ಹೇಳಿದ್ದಾರೆ. ದೇವಸ್ಥಾನದ ಪ್ರವೇಶಕ್ಕೆ ಯಾವುದೇ ಮಹಿಳೆಯು ಈವರೆಗೂ ಅನುಮತಿ ಕೋರಿಲ್ಲ ಎಂದು ಪಟ್ಟಣಂತಿಟ್ಟ ಜಿಲ್ಲಾಡಳಿತ ತಿಳಿಸಿದೆ.

**

‘ಶಬರಿಮಲೆಗೆ ಯುವ ಪತ್ರಕರ್ತೆಯರು ಬೇಡ’

ಕೋಟಯಂ (ಕೇರಳ): ಶಬರಿಮಲೆಗೆ ಋತುಸ್ರಾವದ ವಯಸ್ಸಿನ ಪತ್ರಕರ್ತೆಯರನ್ನು ಕಳುಹಿಸಬಾರದು ಎಂದು ಕೇರಳದ ಹಲವು ಹಿಂದೂ ಸಂಘಟನೆಗಳು ಮಾಧ್ಯಮ ಸಂಸ್ಥೆಗಳಿಗೆ ಮನವಿ ಮಾಡಿವೆ.

ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶದ ವಿರುದ್ಧ ಹೋರಾಟ ನಡೆಸುತ್ತಿರುವ ‘ಶಬರಿಮಲೆ ಕರ್ಮ ಸಮಿತಿ’ ಈ ಮನವಿ ಮಾಡಿದ್ದು, ಇದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ), ಹಿಂದೂ ಐಕ್ಯವೇದಿ ಸೇರಿದಂತೆ ಬಲಪಂಥೀಯ ಸಂಘಟನೆಗಳ ಜಂಟಿ ವೇದಿಕೆಯಾಗಿದೆ.

ತೀರ್ಪಿನ ನಂತರ ಮೊದಲ ಬಾರಿಗೆ ಕಳೆದ ತಿಂಗಳು ದೇವಸ್ಥಾನದ ಬಾಗಿಲು ತೆರೆದಾಗ, ವರದಿಗಾರ್ತಿಯರನ್ನು ದಾರಿ ಮಧ್ಯದಲ್ಲೇ ತಡೆಯಲಾಗಿತ್ತು. ಅವರ ವಾಹನಗಳ ಮೇಲೆ ದಾಳಿ ನಡೆಸಲಾಗಿತ್ತು. ಅಲ್ಲದೆ, ಹಿಂದೂ ಸಂಘಟನೆಗಳ ಸದಸ್ಯರನ್ನು ಒಳಗೊಂಡ ಪ್ರತಿಭಟನಕಾರರು ರಸ್ತೆತಡೆ ನಡೆಸಿ, ಹಲವು ಯುವ ಮಹಿಳಾ ಭಕ್ತರನ್ನು ಬಲವಂತವಾಗಿ ಹಿಂದಕ್ಕೆ ಕಳುಹಿಸಿದ್ದರು.

**

ತೆರೆಯುವುದು ಯಾಕೆ?

ತಿರುವಾಂಕೂರು ರಾಜಮನೆತನದ ಕೊನೆಯ ರಾಜ ಚಿತ್ತಿರ ತಿರುನಾಳ್‌ ಬಲರಾಮ ವರ್ಮ ಅವರ ಜನ್ಮದಿನದ ಪ್ರಯುಕ್ತ ಮಂಗಳವಾರ ನಡೆಯಲಿರುವ ‘ಚಿತ್ತಿರ ಆಟ್ಟವಿಶೇಷಂ’ ಅಂಗವಾಗಿ ದೇಗುಲದ ಬಾಗಿಲನ್ನು ತೆರೆಯಲಾಗುತ್ತದೆ. ಮಂಗಳವಾರ ರಾತ್ರಿ 10ಕ್ಕೆ ಮುಚ್ಚಲಾಗುತ್ತದೆ.

**

ಮಹಿಳೆಯರಿಗೆ ಪ್ರತ್ಯೇಕ ದಿನ ನಿಗದಿಪಡಿಸಿ

ಮಂಗಳೂರು: ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶ ಮಾಡುವುದರಿಂದ ಅನುಷ್ಠಾನನಿರತ ಭಕ್ತರಿಗೆ ತೊಂದರೆಯಾಗುವುದಿದ್ದರೆ ಮಹಿಳೆಯರಿಗೆ ಪ್ರತ್ಯೇಕ ದಿನ ನಿಗದಿಪಡಿಸಿ ಪ್ರವೇಶಾವಕಾಶ ಕಲ್ಪಿಸಬಹುದು ಎಂದು ಲೇಖಕಿ ಪ್ರೀತಿ ನಾಗರಾಜ್‌ ಹೇಳಿದರು.

ಮಂಗಳೂರು ಸಾಹಿತ್ಯೋತ್ಸವದಲ್ಲಿ ಭಾನುವಾರ ಮಾತನಾಡಿದ ಅವರು, ‘ಹೋರಾಟಕ್ಕಾಗಿಯೇ ಈ ವಿಚಾರವನ್ನು ಬಳಸಿಕೊಂಡು, ದೇವಸ್ಥಾನಕ್ಕೆ ಪ್ರವೇಶ ಕಲ್ಪಿಸುವಂತೆ ಆಗ್ರಹಿಸುವುದು ಸರಿಯಲ್ಲ. ಭಕ್ತಿಯಿಂದ ಪ್ರವೇಶಿಸುವ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಕೂಡದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.