ADVERTISEMENT

ಕೋವಿಡ್‌ ನಿರ್ಬಂಧದ ವೇಳೆ ಆರ್ಥಿಕತೆ, ಬದುಕು, ಸಾಮಾನ್ಯರ ಹಿತ ರಕ್ಷಣೆ ಮುಖ್ಯ: ಮೋದಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2022, 13:35 IST
Last Updated 13 ಜನವರಿ 2022, 13:35 IST
ನರೇಂದ್ರ ಮೋದಿ
ನರೇಂದ್ರ ಮೋದಿ    

ನವದೆಹಲಿ: ಕೋವಿಡ್‌ ನಿರ್ಬಂಧಗಳನ್ನು ರೂಪಿಸುವಾಗ ಆರ್ಥಿಕತೆ, ಬದುಕು ಮತ್ತು ಸಾಮಾನ್ಯರ ಹಿತ ರಕ್ಷಿಸಬೇಕಾದ್ದು ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ದೇಶದ ಕೋವಿಡ್‌ ಸ್ಥಿತಿಗತಿಯ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಿದರು.

ಆರ್ಥಿಕತೆ, ಜನಜೀವನ, ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಕೋವಿಡ್‌ ನಿಯಮಗಳನ್ನು ರೂಪಿಸಬೇಕು. ಕೋವಿಡ್‌ ನಿರ್ಬಂಧಗಳು ಸ್ಥಳೀಯ ಕಂಟೈನ್‌ಮೆಂಟ್‌ ಪ್ರದೇಶಗಳನ್ನು ಕೇಂದ್ರೀಕರಿಸಿರಬೇಕು ಎಂದು ಅವರು ಸೂಚಿಸಿದರು.

ADVERTISEMENT

ಹಿಂದಿನ ರೂಪಾಂತರಿ ತಳಿಗೆ ಹೋಲಿಸಿದರೆ ಓಮೈಕ್ರಾನ್ ವೇಗವಾಗಿ ಹರಡುತ್ತಿದೆ. ಇದು ಇನ್ನಷ್ಟು ಹರಡಲಿದೆ. ನಮ್ಮ ಆರೋಗ್ಯ ತಜ್ಞರು ಪರಿಸ್ಥಿತಿಯನ್ನು ಗಮನಿಸುತ್ತಿದ್ದಾರೆ. ನಾವು ಎಚ್ಚರದಿಂದ ಇರಬೇಕು. ಆದರೆ ಭಯಪಡಬಾರದು ಎಂದು ಪ್ರಧಾನಿ ಸಲಹೆ ನೀಡಿದರು.

ಕೇಂದ್ರವು ರಾಜ್ಯಗಳಿಗೆ ಮಂಜೂರು ಮಾಡಿದ ₹23,000 ಕೋಟಿಗಳ ಪ್ಯಾಕೇಜ್ ಅನ್ನು ಅನೇಕ ರಾಜ್ಯಗಳು ಆರೋಗ್ಯ ಮೂಲಸೌಕರ್ಯಕ್ಕೆ ಬಳಸಿಕೊಂಡಿವೆ. ಶೇ 100 ರಷ್ಟು ಲಸಿಕೀಕರಣವನ್ನು ಸಾಧಿಸಲು 'ಹರ್ ಘರ್ ದಸ್ತಕ್' ಕಾರ್ಯಕ್ರಮವನ್ನು ಇನ್ನಷ್ಟು ವೇಗಗೊಳಿಸಬೇಕಾಗಿದೆ. ಭಾರತೀಯರಾದ ನಾವು ನಮ್ಮ ಸಾಮೂಹಿಕ ಪ್ರಯತ್ನದಿಂದ ಕೊರೊನಾವೈರಸ್ ವಿರುದ್ಧ ಖಂಡಿತವಾಗಿಯೂ ವಿಜಯಶಾಲಿಯಾಗುತ್ತೇವೆ ಎಂದು ಮೋದಿ ವಿಶ್ವಾಸ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.