ADVERTISEMENT

ಕರ್ವಾ ಚೌತ್‌: ಮೆಹೆಂದಿ ಹಾಕದಂತೆ ಮುಸ್ಲಿಂ ಯುವಕರಿಗೆ ವಿಎಚ್‌ಪಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2022, 16:16 IST
Last Updated 12 ಅಕ್ಟೋಬರ್ 2022, 16:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ಉತ್ತರ ಪ್ರದೇಶದ ಕೋಮು ಸೂಕ್ಷ್ಮ ಪ್ರದೇಶವಾಗಿರುವ ಮುಜಾಫರ್‌ನಗರದಲ್ಲಿ ಕರ್ವಾ ಚೌತ್‌ ವೇಳೆ ಹಿಂದೂ ಹೆಣ್ಣುಮಕ್ಕಳಿಗೆ ಮೆಹೆಂದಿ ಹಾಕದಂತೆ ಮುಸ್ಲಿಂ ಯುವಕರಿಗೆ ವಿಶ್ವ ಹಿಂದೂ ಪರಿಷತ್ತು ಸೇರಿದಂತೆ ಇತರೆ ಹಿಂದೂಪರ ಸಂಘಟನೆಗಳು ಬುಧವಾರ ಎಚ್ಚರಿಕೆ ನೀಡಿವೆ.

ಮಹಿಳೆಯರುಗುರುವಾರ ಕರ್ವಾ ಚೌತ್‌ ಆಚರಣೆಗಾಗಿ ಉಪವಾಸ ಇರಲಿದ್ದಾರೆ. ಈ ಹಬ್ಬದ ಆಚರಣೆಗಾಗಿ ಹಿಂದೂ ಹೆಣ್ಣುಮಕ್ಕಳು ತಮ್ಮ ಕೈಗೆ ಮೆಹೆಂದಿ ಹಾಕಿಕೊಳ್ಳುವುದು ಸಂಪ್ರದಾಯ. ಹೆಚ್ಚಾಗಿ ಮುಸ್ಲಿಂ ಸಮುದಾಯದವರೇ ಹಿಂದೂಗಳಿಗೆ ಮೆಹೆಂದಿ ಹಾಕುತ್ತಾರೆ. ಹೀಗೆ ‘ಮೆಹೆಂದಿ ಹಾಕುವಾಗ, ಹಿಂದೂ ಹೆಣ್ಣುಮಕ್ಕಳಿಗೆ ಆಮಿಷಗಳನ್ನು ಒಡ್ಡಿ ಲವ್‌ ಜಿಹಾದ್‌ ಹಾಗೂ ಮತಾಂತರಕ್ಕಾಗಿ ಪ್ರೇರೇಪಿಸುತ್ತಾರೆ’ ಎಂದು ಈ ಸಂಘಟನೆಗಳು ಆರೋಪಿಸಿವೆ.

‘ಹಿಂದೂ ಹೆಣ್ಣುಮಕ್ಕಳು ಮೆಹೆಂದಿ ಹಾಕಿಕೊಳ್ಳಲು ಅನುಕೂಲವಾಗುವಂತೆ ಜಿಲ್ಲೆಯಲ್ಲಿ 13 ಮೆಹೆಂದಿ ಹಾಕುವ ಅಂಗಡಿಗಳನ್ನು ತೆರೆದಿದ್ದೇವೆ. ನಮ್ಮ ಸೊಸೆ, ಹೆಣ್ಣುಮಕ್ಕಳಿಗೆ ಹಿಂದೂಗಳೇ ಈ ಅಂಗಡಿಗಳಲ್ಲಿ ಮೆಹೆಂದಿ ಹಾಕಲಿದ್ದಾರೆ’ ಎಂದು ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾ ಮುಖಂಡ ಬುಧವಾರ ಹೇಳಿದರು.

ADVERTISEMENT

‘ಜಿಲ್ಲೆಯಲ್ಲಿರುವ ಮಾರುಕಟ್ಟೆಗಳಲ್ಲಿ ನಮ್ಮ ಸಂಘಟನೆಯ ಹುಡುಗರು ಕಣ್ಗಾವಲಿದ್ದಾರೆ. ಮುಸ್ಲಿಂ ಸಮುದಾಯದವರು ಮೆಹೆಂದಿ ಹಾಕದಂತೆ ಅವರು ನೋಡಿಕೊಳ್ಳಲಿದ್ದಾರೆ. ನಾವು ಮುಸ್ಲಿಂ ಯುವಕರಿಗೆ ‘ಒಳ್ಳೆ ಬುದ್ಧಿ’ ಕಲಿಸುತ್ತೇವೆ’ ಎಂದರು.

‘ವಿಶ್ವ ಹಿಂದೂ ಪರಿಷತ್ತು ಸೇರಿದಂತೆ ಇತರೆ ಹಿಂದೂಪರ ಸಂಘಟನೆಗಳು ನೀಡುವ ಎಚ್ಚರಿಕೆ ಬಗ್ಗೆ ಮಾಹಿತಿ ಇಲ್ಲ. ಜಿಲ್ಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ಜಿಲ್ಲೆಯ ಹಿರಿಯ ಅಧಿಕಾರಿಗಳು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.