ADVERTISEMENT

ಸ್ವಯಂ ರಕ್ಷಣೆಗಾಗಿ ಬಾಟಲ್‌, ಆಯುಧಗಳನ್ನು ಮನೆಯಲ್ಲಿಟ್ಟುಕೊಳ್ಳಿ: ಸಾಕ್ಷಿ ಮಹಾರಾಜ್

ಐಎಎನ್ಎಸ್
Published 24 ಏಪ್ರಿಲ್ 2022, 12:42 IST
Last Updated 24 ಏಪ್ರಿಲ್ 2022, 12:42 IST
ಸಾಕ್ಷಿ ಮಹಾರಾಜ್
ಸಾಕ್ಷಿ ಮಹಾರಾಜ್   

ಲಖನೌ: ಗುಂಪು ದಾಳಿಯ ಸಂದರ್ಭದಲ್ಲಿ ಜನರು ತಮ್ಮ ಮನೆಗಳನ್ನು ಬಾಟಲಿಗಳು ಮತ್ತು ಆಯುಧಗಳಿಂದ ಸಜ್ಜುಗೊಳಿಸಿಕೊಳ್ಳಬೇಕು ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಒತ್ತಾಯಿಸಿದ್ದಾರೆ. ಅಲ್ಲದೆ, ಇಂತಹ ಸಮಯದಲ್ಲಿ ಪೊಲೀಸರು ಕೂಡ ನಮ್ಮನ್ನು ರಕ್ಷಿಸುವುದಿಲ್ಲ. ಹಾಗಾಗಿಯೇ ಸಿದ್ಧರಾಗಿರಬೇಕು ಎಂದು ಹೇಳಿದ್ದಾರೆ.

ವಿವಾದಾತ್ಮಕ ಹೇಳಿಕೆಗಳಿಂದಲೇ ಆಗಾಗ್ಗೆ ಸುದ್ದಿಯಲ್ಲಿರುವ ಉನ್ನಾವೊ ಸಂಸದ ಸಾಕ್ಷಿ ಅವರು ಫೇಸ್‌ಬುಕ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. 'ಈ ಗುಂಪು ನಿಮ್ಮ ಬೀದಿ, ನೆರೆಹೊರೆ ಅಥವಾ ಮನೆಗೆ ಇದ್ದಕ್ಕಿದ್ದಂತೆ ಬಂದರೆ, ಅದಕ್ಕೆ ಪರಿಹಾರವಿದೆ... ಅಂತಹ ಅತಿಥಿಗಳಿಗೆ, ಪ್ರತಿ ಮನೆಯಲ್ಲೂ ಒಂದು ಅಥವಾ ಎರಡು ತಂಪು ಪಾನೀಯಗಳ ಪೆಟ್ಟಿಗೆಗಳು ಮತ್ತು ಕೆಲವು ಆಯುಧಗಳು ಇರಬೇಕು. ಜೈ ಶ್ರೀ ರಾಮ್' ಎಂದಿದ್ದಾರೆ.

ಅವರ ಈ ಸಂದೇಶದ ಜೊತೆಗೆ, ಕೋಲುಗಳನ್ನು ಹಿಡಿದಿರುವ ಜನರು ಬೀದಿಯಲ್ಲಿ ಅಟ್ಟಿಸಿಕೊಂಡು ಬರುತ್ತಿರುವ ಫೋಟೊವನ್ನು ಪೋಸ್ಟ್ ಮಾಡಿದ್ದಾರೆ.

ADVERTISEMENT

'ಯಾವುದೇ ಗುಂಪು ನಿಮ್ಮ ಮೇಲೆ ದಾಳಿ ನಡೆಸಿದಾಗ ಪೊಲೀಸರು ಕೂಡ ನಿಮ್ಮನ್ನು ಉಳಿಸಲು ಬರುವುದಿಲ್ಲ, ಬದಲಿಗೆ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಅಡಗಿಕೊಳ್ಳುತ್ತಾರೆ. ಈ ಜನರು 'ಜಿಹಾದ್' ಮಾಡುತ್ತಾರೆ ಮತ್ತು ಹೋಗುತ್ತಾರೆ. ಬಳಿಕ ಪೊಲೀಸರು ಲಾಠಿಗಳೊಂದಿಗೆ ಬಂದು ಎಲ್ಲವೂ ಮುಗಿದ ನಂತರ ತನಿಖಾ ಸಮಿತಿಯನ್ನು ರಚಿಸುತ್ತಾರೆ' ಎಂದಿದ್ದಾರೆ.

ಏ. 16 ರಂದು ದೆಹಲಿಯ ಜಹಾಂಗೀರ್‌ಪುರಿಯಲ್ಲಿ ನಡೆದ ಕೋಮು ಘರ್ಷಣೆಯ ಹಿನ್ನೆಲೆಯಲ್ಲಿ ಸಾಕ್ಷಿ ಮಹಾರಾಜ್ ಅವರು ಈ ಪೋಸ್ಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ರಾಮನವಮಿಯ ಮೆರವಣಿಗೆ ವೇಳೆ ಹಲವು ರಾಜ್ಯಗಳಲ್ಲಿ ಕೋಮು ಘರ್ಷಣೆಗಳಾದ ಮತ್ತು ಕಲ್ಲು ತೂರಾಟ ನಡೆದ ಘಟನೆಗಳು ವರದಿಯಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.