ADVERTISEMENT

ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ: ಜೈಪುರ v/s ಪುಣೆ; ಗೊಂದಲದಲ್ಲಿ ಕುಸ್ತಿಪಟುಗಳು

ಪಿಟಿಐ
Published 18 ಜನವರಿ 2024, 15:41 IST
Last Updated 18 ಜನವರಿ 2024, 15:41 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಭಾರತೀಯ ಕುಸ್ತಿ ಒಕ್ಕೂಟ (WFI)ದ ಅಡ್‌ಹಾಕ್ ಸಮಿತಿ ಮತ್ತು ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್ ಸಿಂಗ್ ಎರಡು ಪ್ರತ್ಯೇಕ ಪಂದ್ಯಾವಳಿಗಳನ್ನು ಆಯೋಜಿಸಿದ್ದು, ಇದು ಕುಸ್ತಿಪಟುಗಳನ್ನು ಇಕ್ಕಟ್ಟಿಗೆ ಸಿಲುಕಿಸಿವೆ.

ಅಡ್‌ಹಾಕ್ ಸಮಿತಿಯು ಜೈಪುರದಲ್ಲಿ ಫೆ. 2ರಿಂದ 5ರವರೆಗೆ ಕುಸ್ತಿ ಪಂದ್ಯಾವಳಿ ಆಯೋಜಿಸಿದೆ. ಮತ್ತೊಂದೆಡೆ ಬ್ರಿಜ್ ಭೂಷಣ್ ಅನುಯಾಯಿಗಳು ಪುಣೆಯಲ್ಲಿ ಜ. 29ರಂದು ಪಂದ್ಯಾವಳಿ ಆಯೋಜಿಸಿದ್ದಾರೆ.

ADVERTISEMENT

ಹಿರಿಯರ ರಾಷ್ಟ್ರಮಟ್ಟದ ಪಂದ್ಯಾವಳಿಯನ್ನು ಫೆ. 2ರಿಂದ 5ರವರೆಗೆ ನಡೆಸುವುದಾಗಿ ಡಬ್ಲೂಎಫ್‌ಐನ ಅಡ್‌ ಹಾಕ್ ಸಮಿತಿ ಕಳೆದ ತಿಂಗಳು ಘೋಷಿತ್ತು. ಭೂಪೀಂದರ್‌ ಸಿಂಗ್ ಬಾಜ್ವಾ ನೇತೃತ್ವದ ಸಮಿತಿಯು ಈ ಪಂದ್ಯಾವಳಿ ಆಯೋಜಿಸಿದ್ದು, ಇದರಲ್ಲಿ ಹಿರಿಯರ ಫ್ರೀ ಸ್ಟೈಲ್‌, ಗ್ರೆಕೋ ರೋಮನ್‌ ಮತ್ತು ಮಹಿಳೆಯರ ವಿಭಾಗದ ಪಂದ್ಯಗಳು ನಡೆಯಲಿವೆ.

ಅಡ್‌ಹಾಕ್ ಸಮಿತಿ ಆಯೋಜಿಸಿರುವ ಪಂದ್ಯದಲ್ಲೇ ಭಾಗವಹಿಸುವಂತೆ ಒಲಿಂಪಿಕ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲ್ಲಿಕ್‌ ಸಲಹೆ ನೀಡಿದ್ದಾರೆ. ಈ ಕುರಿತ ವಿಡಿಯೊ ಸಂದೇಶವನ್ನು ಅವರು ಎಕ್ಸ್ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಒಡ್ಡಿದ ಆರೋಪದಡಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್ ಶರಣ್ ಸಿಂಗ್ ವಿರುದ್ಧ ಸಾಕ್ಷಿ ಮಲ್ಲಿಕ್ ಅವರೊಂದಿಗೆ ಬಜರಂಗ್ ಪೂನಿಯಾ ಹಾಗೂ ವಿನೇಶಾ ಫೋಗೆಟ್‌ ಅವರು ದೀರ್ಘಕಾಲದವರೆಗೆ ಸಂಘರ್ಷ ನಡೆಸುತ್ತಿದ್ದಾರೆ. 

ಎರಡು ಪಂದ್ಯಗಳ ಆಯೋಜನೆ ಕುರಿತು ಪ್ರತಿಕ್ರಿಯಿಸಿರುವ ಮಹಿಳಾ ಕುಸ್ತಿಪಟುವೊಬ್ಬರು, ‘ಪುಣೆಯಲ್ಲಿ ಆಯೋಜಿಸಿರುವ ಪಂದ್ಯಾವಳಿಯಲ್ಲಿ ನಾವು ಪಾಲ್ಗೊಳ್ಳುತ್ತಿದ್ದೇವೆ. ಆದರೆ ಸರ್ಕಾರ ನೇಮಿಸಿರುವ ಅಡ್‌ಹಾಕ್ ಸಮಿತಿ ಆಯೋಜಿಸಿರುವ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿಲ್ಲ’ ಎಂದಿದ್ದಾರೆ.

‘ಬಹುತೇಕ ರಾಜ್ಯಗಳು ಪುಣೆಗೇ ತೆರಳುತ್ತಿವೆ. ಹರಿಯಾಣದಲ್ಲಿ ಬಣ ವಿಭಜನೆಗೊಂಡಿರುವುದರಿಂದ ಅಲ್ಲಿ ಸಮಸ್ಯೆ ಇದೆ. ಆದರೆ ದೆಹಲಿ, ಪಂಜಾಬ್ ಮತ್ತು ರಾಜಸ್ಥಾನದ ತಂಡಗಳು ಪುಣೆಗೆ ಹೋಗುತ್ತಿವೆ. ಕೆಲವರು ಮಾತ್ರ ಜೈಪುರಕ್ಕೆ ಹೋಗುತ್ತಿದ್ದಾರೆ’ ಎಂದಿದ್ದಾರೆ.

ಈ ನಡುವೆ ಅಮಾನತು ಆದೇಶ ಹಿಂಪಡೆಯುವಂತೆ ಸರ್ಕಾರವನ್ನು ಕೋರುವುದಾಗಿ WFI ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.