ನವದೆಹಲಿ: ‘ನಾವು ಯಾವುದೇ ಸೇಡಿನ ರಾಜಕಾರಣ ಮಾಡುವುದಿಲ್ಲ. ಪ್ರತಿಭಟನನಿರತ ಕುಸ್ತಿಪಟುಗಳು ಕ್ರೀಡೆಯಲ್ಲಿ ಮುಂದುವರಿಯಲು ಬಯಸಿದರೆ ನ್ಯಾಯಯುತವಾದ ಅವಕಾಶ ನೀಡಲು ಬದ್ಧ’ ಎಂದು ಡಬ್ಲ್ಯುಎಫ್‌ಐ ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್ ಸಿಂಗ್ ಹೇಳಿದ್ಧಾರೆ.
ಗುರುವಾರ ಚುನಾವಣೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾವುದೇ ಪಕ್ಷಪಾತ ಇರುವುದಿಲ್ಲ. ಎಲ್ಲರಿಗೂ ಡಬ್ಲ್ಯುಎಫ್ಐ ಬೆಂಬಲ ಸಿಗಲಿದೆ. ನಾವು ಆಟವನ್ನು ನೋಡಿಕೊಳ್ಳಬೇಕೇ ಹೊರತು ಕುಸ್ತಿಪಟುಗಳ ತಪ್ಪುಗಳನ್ನಲ್ಲ’ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಸಂಜಯ್ ಸಿಂಗ್, ‘ಕಳೆದ 7-8 ತಿಂಗಳುಗಳಲ್ಲಿ ತೊಂದರೆ ಅನುಭವಿಸಿದ ದೇಶದ ಸಾವಿರಾರು ಕುಸ್ತಿಪಟುಗಳಿಗೆ ಸಂದ ಗೆಲುವು ಇದಾಗಿದೆ’ ಎಂದು ಸಂಜಯ್ ಸಿಂಗ್ ಹೇಳಿದರು.
‘ನಾವು ರಾಜಕೀಯಕ್ಕೆ ರಾಜಕೀಯ ಮೂಲಕ ಮತ್ತು ಕುಸ್ತಿಗೆ ಕುಸ್ತಿ ಮೂಲಕ ಪ್ರತಿಕ್ರಿಯಿಸುತ್ತೇವೆ’ ಎಂದು ಸಂಜಯ್ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಬ್ರಿಜ್ ಭೂಷಣ್ ಬಣವುಎಲ್ಲ 4 ಉಪಾಧ್ಯಕ್ಷ ಸ್ಥಾನಗಳನ್ನು ಗೆದ್ದುಕೊಂಡಿತು. ದೆಹಲಿಯ ಜೈ ಪ್ರಕಾಶ್ (37), ಪಶ್ಚಿಮ ಬಂಗಾಳದ ಅಸಿತ್ ಕುಮಾರ್ ಸಹಾ (42), ಪಂಜಾಬ್‌ನ ಕರ್ತಾರ್ ಸಿಂಗ್ (44) ಮತ್ತು ಮಣಿಪುರದ ಎನ್ ಫೋನಿ (38) ಗೆದ್ದಿದ್ದಾರೆ.
ಬ್ರಿಜ್ ಭೂಷಣ್ ಬಣದ ಉತ್ತರಾಖಂಡದ ಸತ್ಯಪಾಲ್ ಸಿಂಗ್ ದೇಶ್ವಾಲ್ ನೂತನ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಕೇವಲ ಐದು ಮತ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.