ADVERTISEMENT

Sambhal Violence | ಲೋಕಸಭೆಯಲ್ಲಿ ಮತ್ತೆ ಗದ್ದಲ; ವಿಪಕ್ಷಗಳಿಂದ ಸಭಾತ್ಯಾಗ

ಪಿಟಿಐ
Published 3 ಡಿಸೆಂಬರ್ 2024, 7:03 IST
Last Updated 3 ಡಿಸೆಂಬರ್ 2024, 7:03 IST
<div class="paragraphs"><p>ಲೋಕಸಭೆ: ವಿಪಕ್ಷಗಳ ಸಭಾತ್ಯಾಗ</p></div>

ಲೋಕಸಭೆ: ವಿಪಕ್ಷಗಳ ಸಭಾತ್ಯಾಗ

   

ನವದೆಹಲಿ: ಉದ್ಯಮಿ ಗೌತಮ್‌ ಅದಾನಿ ಲಂಚ ಹಗರಣ, ಮಣಿಪುರ ಗಲಭೆ ಮತ್ತು ಸಂಭಲ್‌ ಹಿಂಸಾಚಾರದ ಬಗ್ಗೆ ಚರ್ಚೆಗೆ ವಿಪಕ್ಷಗಳು ಪಟ್ಟು ಹಿಡಿದ ಕಾರಣ ಗದ್ದಲಕ್ಕೆ ಕಾರಣವಾಗಿದ್ದ ಸಂಸತ್ತು, ಐದು ದಿನಗಳ ಬಳಿಕ ಮಂಗಳವಾರ ಸುಗಮ ಕಲಾಪಕ್ಕೆ ಸಾಕ್ಷಿಯಾಯಿತು.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿವಿಧ ವಿಷಯಗಳನ್ನು ತಕ್ಷಣದಲ್ಲೇ ಚರ್ಚೆಗೆ ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿ ‘ಇಂಡಿಯಾ’ ಮೈತ್ರಿಕೂಟದ ಸಂಸದರ ನೋಟಿಸ್‌ ನೀಡಿದರಾದರೂ, ಬಿಗಿ ಪಟ್ಟು ಹಿಡಿದು ಕಲಾಪಕ್ಕೆ ಅಡ್ಡಿಪಡಿಸಲಿಲ್ಲ.

ADVERTISEMENT

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಸಂವಿಧಾನದ ಕುರಿತು ಎರಡು ದಿನಗಳ ಚರ್ಚೆ ನಡೆಸಬೇಕು ಎಂಬ ವಿಪಕ್ಷಗಳ ಬೇಡಿಕೆಗೆ ಸರ್ಕಾರ ಸೋಮವಾರ ಸಮ್ಮತಿ ಸೂಚಿಸಿತ್ತು. ಇದರಿಂದ ಮಂಗಳವಾರದಿಂದ ಕಲಾಪ ಸುಗಮವಾಗಿ ನಡೆಯುವ ನಿರೀಕ್ಷೆ ಮೂಡಿತ್ತು.

ಬೆಳಿಗ್ಗೆ ಕಲಾಪ ಆರಂಭಕ್ಕೂ ಮುನ್ನ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಮತ್ತು ಮೈತ್ರಿಕೂಟದ ಇತರ ಪಕ್ಷಗಳ ಸದಸ್ಯರು ಅದಾನಿ ವಿಷಯಕ್ಕೆ ಸಂಬಂಧಿಸಿದಂತೆ ಸಂಸತ್‌ ಭವನದ ‘ಮಕರ ದ್ವಾರ’ದ ಬಳಿ ಪ್ರತಿಭಟನೆ ನಡೆಸಿದರು. ‘ಮೋದಿ– ಅದಾನಿ ಏಕ್‌ ಹೆ’ ಎಂದು ಬರೆದಿದ್ದ ಬ್ಯಾನರ್‌ ಹಿಡಿದಿದ್ದ ಸಂಸದರು, ಅದಾನಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.

‘ಅದಾನಿ ವಿರುದ್ಧದ ಗಂಭೀರ ಆರೋಪಗಳ ಕುರಿತಂತೆ ಪ್ರಶ್ನೆಗಳನ್ನು ಎದುರಿಸಲು ಮೋದಿ ಸರ್ಕಾರ ಸಿದ್ಧವಿಲ್ಲ. ಏಕೆಂದರೆ ಹಗರಣದಲ್ಲಿ ಅವರೂ ಭಾಗಿಯಾಗಿದ್ದಾರೆ. ಸಂಸತ್ತು, ಅವರನ್ನು ಹೊಣೆಗಾರರನ್ನಾಗಿ ಮಾಡಬೇಕಾದ ವೇದಿಕೆಯಾಗಿದೆ’ ಎಂದು ಕಾಂಗ್ರೆಸ್‌ ಸಂಸದ ಕೆ.ಸಿ.ವೇಣುಗೋಪಾಲ್‌ ಹೇಳಿದರು.

ಸಂಸತ್‌ ಕಲಾಪದ ಆರಂಭದಲ್ಲಿ ವಿರೋಧ ಪಕ್ಷಗಳ ಸದಸ್ಯರು ಸಂಭಲ್‌ ಹಿಂಸಾಚಾರ ಸೇರಿದಂತೆ ವಿವಿಧ ವಿಷಯಗಳ ಕುರಿತ ಚರ್ಚೆಗೆ ಒತ್ತಾಯಿಸಿದರೂ, ಅದರಿಂದ ಕಲಾಪಕ್ಕೆ ಅಡ್ಡಿ ಉಂಟಾಗಲಿಲ್ಲ. ಲೋಕಸಭೆ ಮತ್ತು ರಾಜ್ಯಸಭೆಯು ದಿನದ ಕಲಾಪದ ಮೊದಲ ಗಂಟೆಯಲ್ಲೇ ಎರಡು ಸಲ ವಿಪಕ್ಷ ಸದಸ್ಯರ ಸಭಾತ್ಯಾಗಕ್ಕೆ ಸಾಕ್ಷಿಯಾದವು.

ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್ ಅವರು ಸಂಭಲ್‌ ವಿಷಯ ಪ್ರಸ್ತಾಪಿಸಿದರು. ಆದರೆ ಸ್ಪೀಕರ್‌ ಓಂ ಬಿರ್ಲಾ, ‘ಇಂತಹ ವಿಷಯಗಳನ್ನು ಸಂಸದರು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಬಹುದು’ ಎಂದರು. ಇದರಿಂದ ತೃಪ್ತರಾಗದ ಕೆಲವು ಸಂಸದರು ಸ್ಪೀಕರ್‌ ಪೀಠದ ಮುಂಭಾಗಕ್ಕೆ ಧಾವಿಸಿದರು. ಆ ಬಳಿಕ ಕಲಾಪ ಬಹಿಷ್ಕರಿಸಿ ಹೊರನಡೆದರು. ರಾಹುಲ್‌ ಗಾಂಧಿ ಒಳಗೊಂಡಂತೆ ವಿರೋಧ ಪಕ್ಷಗಳ ಇತರ ಸಂಸದರೂ ಹೊರನಡೆದರು.

ಪ್ರಶ್ನೋತ್ತರ ವೇಳೆ ಆರಂಭವಾಗುತ್ತಿದ್ದಂತೆಯೇ, ಪ್ರತಿಭಟನಾನಿರತ ಸಂಸದರು ಸದನದೊಳಗೆ ಬಂದರು. ಆದರೆ, ಪಿಎಂ–ಕಿಸಾನ್‌ ಯೋಜನೆಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರು ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕುರಿತು ನೀಡಿದ ಉತ್ತರದಿಂದ ಅತೃಪ್ತರಾಗಿ ಮತ್ತೊಮ್ಮೆ ಹೊರನಡೆದರು.

ರಾಜ್ಯಸಭೆಯಲ್ಲೂ ಕಲಾಪ ಬಹಿಷ್ಕಾರ

ವಿರೋಧ ಪಕ್ಷಗಳ ಸದಸ್ಯರು ರಾಜ್ಯಸಭೆಯಲ್ಲೂ ಎರಡು ಸಲ ಕಲಾಪ ಬಹಿಷ್ಕರಿಸಿದರು. ಸಂಭಲ್‌ ವಿಷಯ ಪ್ರಸ್ತಾಪಿಸಿದ ಎಸ್‌ಪಿ ಸಂಸದ ರಾಮಗೋಪಾಲ್‌ ಯಾದವ್‌ ಅವರು ಸದನದಿಂದ ಹೊರನಡೆದರು. ಟಿಎಂಸಿ ಸದಸ್ಯರೂ ಅವರಿಗೆ ಸಾಥ್‌ ನೀಡಿದರು.  ಪಶ್ಚಿಮ ಬಂಗಾಳದಲ್ಲಿ ರೋಹಿಂಗ್ಯಾ ಸಮುದಾಯದವರ ಉಪಸ್ಥಿತಿಯ ಬಗ್ಗೆ ಬಿಜೆಪಿ ಸಂಸದರು ನೀಡಿದ್ದ ಹೇಳಿಕೆಯನ್ನು ವಿರೋಧಿಸಿ ಟಿಎಂಸಿ ಸದಸ್ಯರು ಪ್ರತ್ಯೇಕವಾಗಿ ಸಭಾತ್ಯಾಗ ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.