ADVERTISEMENT

ಕೊಲೆ ಬೆದರಿಕೆ ಕರೆಗಳು ಬರುತ್ತಿವೆ: ಸಮೀರ್‌ ವಾಂಖೆಡೆ

​ಪ್ರಜಾವಾಣಿ ವಾರ್ತೆ
Published 22 ಮೇ 2023, 15:58 IST
Last Updated 22 ಮೇ 2023, 15:58 IST
ಸಮೀರ್‌ ವಾಂಖೆಡೆ
ಸಮೀರ್‌ ವಾಂಖೆಡೆ   

ಮುಂಬೈ: ಮಾದಕವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಮುಂಬೈ ವಲಯದ ಮಾಜಿ ಮುಖ್ಯಸ್ಥ ಸಮೀರ್‌ ವಾಂಖೆಡೆ ಅವರು ತಮಗೆ ಮತ್ತು ತಮ್ಮ ಪತ್ನಿಗೆ ಕೆಲ ದಿನಗಳಿಂದ ಕೊಲೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಸೋಮವಾರ ಆರೋಪಿಸಿದ್ದಾರೆ. ಈ ಕುರಿತು ಮುಂಬೈ ಪೊಲೀಸ್‌ ಆಯುಕ್ತರಿಗೆ ಪತ್ರ ಬರೆದು, ಭದ್ರತೆ ಒದಗಿಸುವಂತೆ ಮನವಿ ಮಾಡುವುದಾಗಿ ಹೇಳಿದ್ದಾರೆ.

ಬಾಲಿವುಡ್‌ ಸೂಪರ್‌ಸ್ಟಾರ್‌ ಶಾರುಖ್‌ ಖಾನ್‌ ಅವರ ಮಗ ಆರ್ಯನ್‌ ಖಾನ್‌ ಅವರನ್ನು ಐಷಾರಾಮಿ ಹಡಗಿನಲ್ಲಿ ಮಾದಕವಸ್ತು ಸೇವನೆ ಪ್ರಕರಣದಲ್ಲಿ ಸಮೀರ್‌ ಬಂಧಿಸಿದ್ದರು. ಆರ್ಯನ್‌ ವಿರುದ್ಧ ದೋಷಾರೋಪಣೆ ಹೊರಿಸದೇ ಇರಲು ₹25 ಕೋಟಿ ಲಂಚ ನೀಡುವಂತೆ ಶಾರುಖ್ ಖಾನ್‌ ಎದುರು ಸಮೀರ್‌ ಬೇಡಿಕೆ ಇರಿಸಿದ್ದರು ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಸಮೀರ್ ಅವರನ್ನು ಸಿಬಿಐ ಶನಿವಾರ ಮತ್ತು ಭಾನುವಾರ ವಿಚಾರಣೆಗೆ ಒಳಪಡಿಸಿತ್ತು. 

ಸಮೀರ್‌ ಜೊತೆ ಇನ್ನೂ ನಾಲ್ವರ ವಿರುದ್ಧ ಸಿಬಿಐ, ಕ್ರಿಮಿನಲ್ ಸಂಚು ಮತ್ತು ಸುಲಿಗೆ ಬೆದರಿಕೆ ಹಾಗೂ ಭ್ರಷ್ಟಾಚಾರ ನಿಯಂತ್ರಣದ ಅಡಿ ಪ್ರಕರಣಗಳನ್ನು ಮೇ 11ರಂದು ದಾಖಲಿಸಿತ್ತು. 

ADVERTISEMENT

ಜೂ.8ರ ವರೆಗೆ ಮಧ್ಯಂತರ ರಕ್ಷಣೆ ವಿಸ್ತರಣೆ

ಎನ್‌ಸಿಬಿ ಮುಂಬೈ ವಲಯ ಮಾಜಿ ಮುಖ್ಯಸ್ಥ ಸಮೀರ್‌ ವಾಂಖೆಡೆ ಅವರಿಗೆ ನೀಡಲಾಗಿದ್ದ ಮಧ್ಯಂತರ ರಕ್ಷಣೆಯನ್ನು ಜೂನ್‌ 8ರವರೆಗೆ ವಿಸ್ತರಿಸಿ ಬಾಂಬೆ ಹೈಕೋರ್ಟ್‌ ಸೋಮವಾರ ಆದೇಶ ನೀಡಿದೆ.  ಆರ್ಯನ್‌ ಬಿಡುಗಡೆಗೊಳಿಸಲು ₹25 ಕೋಟಿ ಲಂಚ ನೀಡುವಂತೆ ಶಾರುಖ್‌ ಖಾನ್‌ ಎದುರು ಸಮೀರ್‌ ಬೇಡಿಕೆ ಇರಿಸಿದ್ದರು ಎಂದು ಆರೋಪಿಸಲಾಗಿರುವ ಪ್ರರಕಣದ ವಿಚಾರಣೆಯು ಕೋರ್ಟ್‌ನಲ್ಲಿ ನಡೆಯುವ ವೇಳೆ ಸಮೀರ್‌ ವಿರುದ್ಧ ಬಂಧನದಂಥ ಒತ್ತಾಯದ ಕ್ರಮಗಳನ್ನು ತೆಗೆದುಕೊಳ್ಳುವಂತಿಲ್ಲ ಎಂದು ಹೈಕೋರ್ಟ್‌ ಸಿಬಿಐಗೆ ಆದೇಶಿಸಿದೆ. ಜೊತೆಗೆ ಪ್ರಕರಣದ ಕುರಿತು ಮಾಧ್ಯಮಗಳ ಎದುರು ಮಾತನಾಡುವುದಿಲ್ಲ ಸಾಕ್ಷ್ಯಗಳನ್ನು ತಿರುಚುವುದಿಲ್ಲ ಮತ್ತು ಸಿಬಿಐ ಕರೆದಾಗ ವಿಚಾರಣೆಗೆ ಹಾಜರಾಗುವುದಾಗಿ ಮುಚ್ಚಳಿಕೆ ಬರೆದುಕೊಡುವಂತೆ ಅವರಿಗೆ ಕೋರ್ಟ್‌ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.