
ಅಹಮದಾಬಾದ್: ಶತಮಾನಗಳಿಂದ ಸೋಮನಾಥ ದೇಗುಲದ ಮೇಲೆ ಪದೇ ಪದೇ ದಾಳಿಗಳು ನಡೆದರೂ ಅದು ಪುನರ್‌ನಿರ್ಮಾಣಗೊಂಡಿರುವುದನ್ನು ಉಲ್ಲೇಖಿಸಿ ಮಂಗಳವಾರ ಮಾತನಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ‘ಸನಾತನ ಧರ್ಮ, ಸಂಸ್ಕೃತಿ ಮತ್ತು ಜನರ ನಂಬಿಕೆಯನ್ನು ಅಳಿಸಿಹಾಕುವುದು ಸುಲಭವಲ್ಲ’ ಎಂದು ಹೇಳಿದರು.
ಗುಜರಾತ್‌ನ ಗಾಂಧಿನಗರ ಜಿಲ್ಲೆಯಲ್ಲಿ ₹267 ಕೋಟಿ ವೆಚ್ಚದ ವಿವಿಧ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ‘ದೇಗುಲವನ್ನು ನಾಶಮಾಡುವ ಸಲುವಾಗಿ ಹಲವಾರು ಮಂದಿ ದಾಳಿಗಳನ್ನು ಮಾಡಿದ್ದಾರೆ. ಆದರೆ ದೇಗುಲವು ಇಂದಿಗೂ ಅದೇ ಸ್ಥಳದಲ್ಲಿ ತಲೆಎತ್ತಿ ನಿಂತಿದೆ’ ಎಂದರು.
‘ಮೊಹಮ್ಮದ್ ಘಜ್ನಿಯು ಸೋಮನಾಥ ದೇಗುಲದ ಮೇಲೆ ದಾಳಿ ಮಾಡಿ ಒಂದು ಸಾವಿರ ವರ್ಷ ಪೂರ್ಣಗೊಂಡಿದ್ದು, ಆ ಕರಾಳ ದಿನದ ನೆನಪಿಗಾಗಿ ಆಚರಿಸಲಾಗುವ ‘ಸೋಮನಾಥ ಸ್ವಾಭಿಮಾನ ಪರ್ವ’ವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜನವರಿ 11ರಂದು ಉದ್ಘಾಟಿಸಿದ್ದಾರೆ. ಒಂದು ಸಾವಿರ ವರ್ಷಗಳಲ್ಲಿ 16 ಬಾರಿ ಸೋಮನಾಥ ದೇಗುಲ ಧ್ವಂಸಗೊಂಡರೂ, ಅದರ ಪತಾಕೆ ಇಂದಿಗೂ ಹಾರುತ್ತಿದೆ’ ಎಂದು ಹೇಳಿದರು.
ಮೋದಿ ನಾಯಕತ್ವದಲ್ಲಿ ಸೋಮನಾಥ ಕಾರಿಡಾರ್ ನಿರ್ಮಾಣ ಮಾಡುವುದಾಗಿ ಅಮಿತ್ ಶಾ ಘೋಷಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.