
ಜ್ಯೋತಿರಾದಿತ್ಯ ಸಿಂಧಿಯಾ
ನವದೆಹಲಿ: ಮೊಬೈಲ್ ಬಳಕೆದಾರರ ಪ್ರತಿಕ್ರಿಯೆ ಆಧರಿಸಿ ‘ಸಂಚಾರ ಸಾಥಿ’ ಆ್ಯಪ್ ಅಳವಡಿಕೆ ಕಡ್ಡಾಯಗೊಳಿಸಿರುವ ಆದೇಶವನ್ನು ಪರಿಷ್ಕರಣೆ ಮಾಡುತ್ತೇವೆ ಎಂದು ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಲೋಕಸಭೆಯಲ್ಲಿ ‘ಸಂಚಾರ ಸಾಥಿ’ ಆ್ಯಪ್ ಕುರಿತಾದ ಚರ್ಚೆ ವೇಳೆ ಮಾತನಾಡಿದ ಅವರು, ‘ಮೊಬೈಲ್ ಬಳಕೆದಾರರು ಸಂಚಾರ ಸಾಥಿ ಆ್ಯಪ್ ಅನ್ನು ಅಳಿಸಲು ಸ್ವತಂತ್ರರು ಮತ್ತು ಅವರು ಅದರಲ್ಲಿ ನೋಂದಣಿ ಮಾಡಿಕೊಳ್ಳುವವರೆಗೆ ಅದು ನಿಷ್ಕ್ರಿಯವಾಗಿರುತ್ತದೆ’ ಎಂದು ಸ್ಪಷ್ಟಪಡಿಸಿದ್ದಾರೆ.
‘ಒಂದು ವೇಳೆ ಆ್ಯಪ್‌ನಲ್ಲಿ ಏನಾದರೂ ಬದಲಾವಣೆ ಅಗತ್ಯವಿದ್ದರೆ ನಾವು ಅದನ್ನು ಮಾಡುತ್ತೇವೆ. ಯಾವುದೇ ವ್ಯಕ್ತಿ ನೋಂದಾಯಿಸಿಕೊಳ್ಳದ ಹೊರತು ಆ್ಯಪ್ ಕಾರ್ಯನಿರ್ವಹಿಸುವುದಿಲ್ಲ. ಮೊಬೈಲ್‌ನಲ್ಲಿ ಆ್ಯಪ್ ಡೌನ್‌ಲೋಡ್ ಆಗಿದೆ ಎಂದ ಮಾತ್ರಕ್ಕೆ ಅದು ಸ್ವಯಂಚಾಲಿತವಾಗಿ ಕಾರ್ಯನಿರ್ವಹಿಸುವುದಿಲ್ಲ’ ಎಂದಿದ್ದಾರೆ.
‘ವಂಚನೆ ಮತ್ತು ಕಳ್ಳತನದಿಂದ ಗ್ರಾಹಕರನ್ನು ರಕ್ಷಿಸುವುದು ಈ ಆ್ಯಪ್‌ನ ಉದ್ದೇಶವೇ ಹೊರತು ಗೂಢಚಾರಿಕೆ ಮಾಡುವುದಲ್ಲ’ ಎಂದು ಅವರು ತಿಳಿಸಿದ್ದಾರೆ.
‘ಈ ಆ್ಯಪ್ ಮೂಲಕ ಯಾವುದೇ ಕರೆ ಮೇಲ್ವಿಚಾರಣೆ, ನಿಗಾ ಮಾಡುವುದಿಲ್ಲ. ಇದರ ಆಧಾರದ ಮೇಲೆ ಯಾವುದೇ ಗೂಢಚಾರಿಕೆಯೂ ನಡೆಯುವುದಿಲ್ಲ. ಈ ಬಗ್ಗೆ ವಿರೋಧ ಪಕ್ಷಗಳು ಆರೋಪಗಳಲ್ಲಿ ಹುರುಳಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ.
‘ಇದು ಸಾರ್ವಜನಿಕರ ರಕ್ಷಣೆಗಾಗಿ ಇರುವ ಅಪ್ಲಿಕೇಷನ್. ವಿರೋಧಿಸುವುದು ಸಲ್ಲ. ಇದರ ಆಧಾರದ ಮೇಲೆ ಫೋನ್ ಐಎಂಇಐ ಸಂಖ್ಯೆ ನಕಲಿಯೊ ಅಥವಾ ಅಸಲಿಯೊ ಎಂಬುದನ್ನು ಗುರುತಿಸಬಹುದಾಗಿದೆ. ಹಲವು ವಂಚನೆಗಳನ್ನು ತಡೆಯಬಹುದಾಗಿದೆ’ ಎಂದು ಅವರು ವಿವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.