ಸಂದೀಪ್ ದೀಕ್ಷಿತ್
–ಪಿಟಿಐ ಚಿತ್ರ
ನವದೆಹಲಿ: ದೆಹಲಿಯಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷವು (ಎಎಪಿ) ಮಹಿಳೆಯರಿಗೆ ವಂಚನೆ ಮಾಡುತ್ತಿದೆ ಎಂದು ಆರೋಪಿಸಿರುವ ಹಿರಿಯ ಕಾಂಗ್ರೆಸ್ ನಾಯಕ ಸಂದೀಪ್ ದೀಕ್ಷಿತ್ ಅವರು ಎಎಪಿಯ ‘ಮಹಿಳಾ ಸಮ್ಮಾನ್’ ಯೋಜನೆ ಕುರಿತು ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಅವರಿಗೆ ದೂರು ನೀಡಿದ್ದಾರೆ.
ಎಎಪಿ ಕಾರ್ಯಕರ್ತರು ಅಸ್ತಿತ್ವದಲ್ಲಿಲ್ಲದ ಯೋಜನೆಗಾಗಿ ಅರ್ಜಿಗಳನ್ನು ಭರ್ತಿ ಮಾಡುವ ಮೂಲಕ ಮಹಿಳೆಯರ ದೂರವಾಣಿ ಸಂಖ್ಯೆ ಮತ್ತು ವಿಳಾಸವನ್ನು ಸಂಗ್ರಹಿಸುತ್ತಿದ್ದಾರೆ ಎಂದು ದೀಕ್ಷಿತ್ ದೂರಿನಲ್ಲಿ ಆರೋಪಿಸಿದ್ದಾರೆ.
ದೆಹಲಿ ಮುಖ್ಯಮಂತ್ರಿ ಆತಿಶಿ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರು ‘ಮಹಿಳಾ ಸಮ್ಮಾನ್’ ಯೋಜನೆ ಈಗಾಗಲೇ ನಗರದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಈಚೆಗೆ ಘೋಷಿಸಿದ್ದರು. ಅದು ನಿಜವಲ್ಲ ಎಂದು ದೀಕ್ಷಿತ್ ಹೇಳಿದ್ದಾರೆ.
‘ಯಾವುದೇ ರಾಜಕೀಯ ಪಕ್ಷಗಳು ಏನು ಬೇಕಾದರೂ ಭರವಸೆ ನೀಡಬಹುದು. ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ₹2,100 ನೀಡುವುದಾಗಿ ಹೇಳಿದ್ದರೆ ಸಮಸ್ಯೆ ಇಲ್ಲ. ಆದರೆ, ಮಹಿಳೆಯರಿಗೆ ಪ್ರತಿ ತಿಂಗಳು ₹1 ಸಾವಿರ ನೆರವು ನೀಡುವ ಯೋಜನೆ ಈಗಾಗಲೇ ಜಾರಿಯಲ್ಲಿದ್ದು, ಅದನ್ನು ₹2,100ಕ್ಕೆ ಹೆಚ್ಚಿಸಲಾಗುವುದು ಎಂದು ಭರವಸೆ ನೀಡಿ ಅರ್ಜಿಗಳನ್ನು ಭರ್ತಿ ಮಾಡುತ್ತಿರುವುದು ಸೂಕ್ತವಲ್ಲ’ ಎಂದು ದೀಕ್ಷಿತ್ ತಿಳಿಸಿದ್ದಾರೆ.
ಅಂತಹ ಯಾವುದೇ ಯೋಜನೆ ಇಲ್ಲ ಎಂದು ದೆಹಲಿ ಸರ್ಕಾರದ ಇಲಾಖೆವೊಂದು ತಿಳಿಸಿದೆ. ‘ಮಹಿಳಾ ಸಮ್ಮಾನ್’ ಯೋಜನೆಗಾಗಿ ಸಂಗ್ರಹಿಸಲಾಗುತ್ತಿರುವ ಮಾಹಿತಿಯು ವಂಚನೆಯ ಪ್ರಕರಣವಾಗಿದೆ ಎಂದು ದೀಕ್ಷಿತ್ ವಾಗ್ದಾಳಿ ನಡೆಸಿದ್ದಾರೆ.
ಮಹಿಳಾ ಸಮ್ಮಾನ್ ಯೋಜನೆಗೆ ವಿರೋಧ
‘ಪಂಜಾಬ್‌ನಲ್ಲಿ ಅಧಿಕಾರಕ್ಕೇರಿದರೆ ಮಹಿಳೆಯರಿಗೆ ತಿಂಗಳಿಗೆ ₹1,100 ನೀಡುವುದಾಗಿ 2022ರಲ್ಲಿ ಎಎಪಿ ಹೇಳಿತ್ತು. ಆದರೆ, ಇನ್ನೂವರೆಗೂ ಹಣ ನೀಡಿಲ್ಲ. ಈಗ ದೆಹಲಿಯಲ್ಲಿಯೂ ಇಂಥದ್ದೇ ಯೋಜನೆಯನ್ನು ಘೋಷಿಸಿದೆ. ಇದು ಮಹಿಳೆಯರಿಗೆ ಮಾಡುತ್ತಿರುವ ‘ದ್ರೋಹ’ ಎಂದು ಬಿಜೆಪಿ ಆರೋಪಿಸಿದೆ.
ಅಶೋಕ ರಸ್ತೆಯಿಂದ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ಮನೆಯವರೆಗೆ ಬಿಜೆಪಿ ಮಹಿಳಾ ಮೋರ್ಚಾವು ಪ್ರತಿಭಟನಾ ಮೆರವಣಿಗೆ ನಡೆಸಿದೆ. ‘ತಿಂಗಳಿಗೆ ₹2,100 ನೀಡುವ ‘ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆ’ ಮೂಲಕ ದೆಹಲಿ ಮಹಿಳೆಯರಿಗೂ ಎಎಪಿ ಮೋಸ ಎಸಗುತ್ತಿದೆ’ ಎಂದು ಪ್ರತಿಭಟನಕಾರರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.