ADVERTISEMENT

ಸಂದೇಶ್‌ಖಾಲಿ ಸ್ಥಿತಿ ಶೋಚನೀಯ: ರೌಡಿಗಳೊಂದಿಗೆ ಕೈಜೋಡಿಸಿರುವ ಪೊಲೀಸರು– ರಾಜ್ಯಪಾಲ

ಪಿಟಿಐ
Published 15 ಫೆಬ್ರುವರಿ 2024, 14:25 IST
Last Updated 15 ಫೆಬ್ರುವರಿ 2024, 14:25 IST
<div class="paragraphs"><p>ರಾಜ್ಯಪಾಲ ಸಿ.ವಿ.ಆನಂದಬೋಸ್‌</p></div>

ರಾಜ್ಯಪಾಲ ಸಿ.ವಿ.ಆನಂದಬೋಸ್‌

   

ಕೋಲ್ಕತ್ತ: ‘ಟಿಎಂಸಿ ನಾಯಕ ಶಹಜಹಾನ್‌ ಶೇಖ್‌ ಹಾಗೂ ಅತನ ಬೆಂಬಲಿಗರಿಂದ ನಡೆದಿದೆ ಎನ್ನಲಾದ ದೌರ್ಜನ್ಯದ ವಿರುದ್ಧ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ಸಂದೇಶ್‌ಖಾಲಿಯಲ್ಲಿನ ಪರಿಸ್ಥಿತಿ ಅತೀವ ಶೋಚನೀಯವಾಗಿದೆ. ರೌಡಿಗಳೊಂದಿಗೆ ಪೊಲೀಸರು ಕೈಜೋಡಿಸಿದ್ದಾರೆ’ ಎಂದು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದಬೋಸ್‌ ಅವರು ತಮ್ಮ ವರದಿಯಲ್ಲಿ ಹೇಳಿದ್ದಾರೆ.

ಕಳೆದ ಕೆಲ ದಿನಗಳಿಂದ ಬಿಗುವಿನ ವಾತಾವರಣದಿಂದ ಕೂಡಿರುವ ಸಂದೇಶ್‌ಖಾಲಿಗೆ ಇತ್ತೀಚೆಗೆ ಭೇಟಿ ನೀಡಿದ್ದ ರಾಜ್ಯಪಾಲ ಬೋಸ್‌ ಅವರು, ಪ್ರತಿಭಟನನಿರತರೊಂದಿಗೂ ಮಾತನಾಡಿದ್ದರು. ನಂತರ, ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಅವರು ಅಲ್ಲಿನ ಪರಿಸ್ಥಿತಿ ಕುರಿತು ವಿವರಿಸಿದ್ದಾರೆ ಎಂದು ರಾಜಭವನ ಮೂಲಗಳು ಹೇಳಿವೆ.

ADVERTISEMENT

‘ತಮ್ಮ ಆರೋಪ‍ಗಳ ಕುರಿತು ಸಮಗ್ರ ತನಿಖೆ ನಡೆಸುವಂತೆ ಸಂದೇಶ್‌ಖಾಲಿ ನಿವಾಸಿಗಳು ಒತ್ತಾಯಿಸುತ್ತಿದ್ದಾರೆ. ಇದಕ್ಕಾಗಿ, ವಿಶೇಷ ಕಾರ್ಯ ಪಡೆ ಇಲ್ಲವೇ, ವಿಶೇಷ ತನಿಖಾ ತಂಡ ರಚಿಸಬೇಕು ಎಂಬುದು ಅವರ ಬೇಡಿಕೆಯಾಗಿದೆ’ ಎಂದು ಬೋಸ್‌ ಅವರು ವರದಿಯಲ್ಲಿ ತಿಳಿಸಿದ್ದಾರೆ.

‘ಸಂದೇಶ್‌ಖಾಲಿಗೆ ಭೇಟಿ ನೀಡಿದ ವೇಳೆ, ಉದ್ವಿಗ್ನಗೊಂಡಿದ್ದ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಅಲ್ಲಿನ ಜನರು ಹಾಗೂ ಸಂತ್ರಸ್ತರೊಂದಿಗೆ ನೇರವಾಗಿ ಮಾತನಾಡಿದ್ದೇನೆ. ನನ್ನ ಪ್ರಕಾರ, ಅಲ್ಲಿನ ಒಟ್ಟಾರೆ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ’ ಎಂದು ಅವರು ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಿದ್ದಾರೆ.

‘ಮಹಿಳೆಯರು ಮತ್ತು ಪುರುಷರಿಗೆ ಹಿಂಸೆ ನೀಡಿದ್ದಲ್ಲೇ, ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿಬಂದಿವೆ. ಇದಲ್ಲದೇ, ಸೀಗಡಿ ಕೃಷಿಗಾಗಿ ಜಮೀನುಗಳನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇಂತಹ ಕಿರುಕುಳ ವಿರುದ್ಧ ಸಂತ್ರಸ್ತರು ಪೊಲಿಸರಿಗೆ ನೀಡಿದ್ದ ದೂರುಗಳನ್ನು ವಾಪಸು ಪಡೆಯುವಂತೆ ಗ್ರಾಮಸ್ಥರನ್ನು ಬಲವಂತ ಮಾಡಿರುವ ಆರೋಪಗಳು ಕೇಳಿಬಂದಿವೆ ಎಂಬುದಾಗಿಯೂ ಬೋಸ್‌ ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ’ ಎಂದು ಇವೇ ಮೂಲಗಳು ಹೇಳಿವೆ.

‘ಪೊಲೀಸರು ದುಷ್ಕರ್ಮಿಗಳ ವಿರುದ್ಧ ಪ್ರಕರಣ ದಾಖಲಿಸುವ ಬದಲು, ಅವರೊಂದಿಗೆ ‘ಹೊಂದಾಣಿಕೆ’ ಮಾಡಿಕೊಳ್ಳುವಂತೆ ಗ್ರಾಮಸ್ಥರಿಗೆ ಸೂಚನೆ ನೀಡಿದ್ದಾರೆ. ಪೊಲೀಸರಂತೆ ವೇಷಭೂಷಣ ಧರಿಸಿದ್ದ ಗೂಂಡಾಗಳು, ರಾತ್ರಿ ಹೊತ್ತಿನಲ್ಲಿ ಸಂತ್ರಸ್ತರ ಮನೆಗಳನ್ನು ಪ್ರವೇಶಿಸಿದ್ದರು’ ಎಂದೂ ವರದಿಯಲ್ಲಿ ವಿವರಿಸಿದ್ದಾರೆ.

ಸಂದೇಶ್‌ಖಾಲಿಗೆ ಇಂದು ಬಿಜೆಪಿ ನಿಯೋಗ

ನವದೆಹಲಿ: ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪಕ್ಷದ ಐವರು ಸಂಸದೆಯರು ಸೇರಿದಂತೆ 6 ಸದಸ್ಯರಿರುವ ಸಮಿತಿಯನ್ನು ರಚಿಸಿದ್ದು, ಈ ತಂಡವು ಸಂದೇಶ್‌ಖಾಲಿಗೆ ಶುಕ್ರವಾರ ಭೇಟಿ ನೀಡಲಿದೆ.

ಕೇಂದ್ರ ಸಚಿವರಾದ ಪ್ರತಿಮಾ ಭೌಮಿಕ್‌, ಅನ್ನಪೂರ್ಣ ದೇವಿ ಅವರು ಸಮಿತಿ ಸಂಚಾಲಕರಾಗಿದ್ದಾರೆ. ಸುನೀತಾ ದುಗ್ಗಲ್‌, ಕವಿತಾ ಪಾಟೀದಾರ, ಸಂಗೀತಾ ಯಾದವ್ ಹಾಗೂ ಉತ್ತರ ಪ್ರದೇಶ ಮಾಜಿ ಡಿಜಿಪಿ ಬ್ರಿಜ್‌ ಲಾಲ್‌ ಅವರು ಸಮಿತಿ ಸದಸ್ಯರಾಗಿದ್ದಾರೆ ಎಂದು ಬಿಜೆಪಿ ಪ್ರಕಟಣೆ ತಿಳಿಸಿದೆ.

ಭೇಟಿ ನೀಡಿದ ಎಸ್‌ಸಿ ಆಯೋಗ

ಕೋಲ್ಕತ್ತ: ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ (ಎನ್‌ಸಿಎಸ್‌ಸಿ) ಸದಸ್ಯರ ತಂಡವೊಂದು ಸಂದೇಶ್‌ಖಾಲಿಗೆ ಗುರುವಾರ ಭೇಟಿ ನೀಡಿ, ಗ್ರಾಮಸ್ಥರ ಅಹವಾಲು ಆಲಿಸಿದೆ.

ಅಧ್ಯಕ್ಷ ಅರುಣ್‌ ಹಲ್ದರ್ ನೇತೃತ್ವದ ತಂಡವು ಗ್ರಾಮಸ್ಥರ ಜೊತೆ ಮಾತನಾಡಿ, ಅವರ ಮೇಲೆ ನಡೆದ ದೌರ್ಜನ್ಯದ ಕುರಿತು ಮಾಹಿತಿ ಸಂಗ್ರಹಿಸಿತು.

ಸಂದೇಶ್‌ಖಾಲಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಒಬಿಸಿ ಸಮುದಾಯಕ್ಕೆ ಸೇರಿದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಆರ್‌ಎಸ್‌ಎಸ್‌ ನಂಟು: ಮಮತಾ ಹೇಳಿಕೆಗೆ ಬಿಜೆಪಿ ಖಂಡನೆ

ನವದೆಹಲಿ: ಸಂದೇಶ್‌ಖಾಲಿ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಆರ್‌ಎಸ್‌ಎಸ್‌ಗೂ ನಂಟಿರುವ ಶಂಕೆ ವ್ಯಕ್ತಪಡಿಸಿ ಪಶ್ಷಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿರುವ ಹೇಳಿಕೆಯನ್ನು ಬಿಜೆಪಿ ಗುರುವಾರ ಖಂಡಿಸಿದೆ.

‘ಒಬ್ಬ ಮಹಿಳಾ ಮುಖ್ಯಮಂತ್ರಿ ಇಂತಹ ಹೇಳಿಕೆ ನೀಡುತ್ತಿರುವುದು ನಾಚಿಕೆಗೇಡು. ನೀವು ಇಷ್ಟೊಂದು ಕ್ರೂರ, ಅಸಹ್ಯ ಹಾಗೂ ಮಹಿಳಾ ವಿರೋಧಿ ಆಗಿರುವುದೇಕೆ’ ಎಂದು ಬಿಜೆಪಿ ನಾಯಕ ರವಿಶಂಕರ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.

‘ಒಂದು ವೇಳೆ, ಇದೇ ರೀತಿಯ ಮಾತುಗಳನ್ನು ಬಿಜೆಪಿ ಆಡಳಿತವಿರುವ ರಾಜ್ಯದ ಮುಖ್ಯಮಂತ್ರಿಯೊಬ್ಬರು ಹೇಳಿದ್ದರೆ, ದೇಶದಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದವು. ರಾಹುಲ್‌ ಗಾಂಧಿ ಸೇರಿದಂತೆ ವಿಪಕ್ಷಗಳ ನಾಯಕರು ಹಾಗೂ ಮಾನವ ಹಕ್ಕುಗಳ ಗುಂಪುಗಳು ದೊಡ್ಡ ದನಿಯಲ್ಲಿ ಮಾತನಾಡುತ್ತಿದ್ದರು. ಇದನ್ನು ನಾಚಿಕೆಗೇಡಿನಿಂದ ಕೂಡಿದ ಇಬ್ಬಗೆ ನೀತಿಯಲ್ಲದೇ ಇನ್ನೇನು’ ಎಂದು ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.